ಇಂಗ್ಲೆಂಡ್ ‌ನಲ್ಲಿರುವ ಪಾಕ್‌ನ ಎಲ್ಲ ಆಟಗಾರರ ಕೋವಿಡ್-19 ಫಲಿತಾಂಶ ನೆಗೆಟಿವ್

Update: 2020-07-01 05:54 GMT

ಲಂಡನ್: ಬ್ರಿಟನ್‌ಗೆ ಬಂದಿಳಿದಿರುವ ಪಾಕಿಸ್ತಾನದ ಎಲ್ಲ 20 ಆಟಗಾರರು ಹಾಗೂ 11 ಮ್ಯಾನೇಜ್‌ಮೆಂಟ್ ಸಿಬ್ಬಂದಿಯ ಕೊರೋನ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಮಂಗಳವಾರ ತಿಳಿಸಿದೆ.

 ಇಂಗ್ಲೆಂಡ್ ತನ್ನ ತರಬೇತಿ ಸಮೂಹ ಹಾಗೂ ಮ್ಯಾನೇಜ್‌ಮೆಂಟ್‌ಗೆ ಸೋಮವಾರ ನಡೆಸಿರುವ ಹೊಸ ಪರೀಕ್ಷೆಯಲ್ಲಿ ಎಲ್ಲವೂ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಇಸಿಬಿ ತಿಳಿಸಿದೆ.

ಇಂಗ್ಲೆಂಡ್ ಆಟಗಾರರು ಹಾಗೂ ಸಿಬ್ಬಂದಿ ಇದೀಗ ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದಾರೆ. ಸತತ ಎರಡು ಬಾರಿ ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುವ ಕಾರಣ ಪಾಕ್‌ನ ಉಳಿದ ಆರು ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಘೋಷಿಸಿದೆ. ಹೀಗಾಗಿ ಇಸಿಬಿ ತನ್ನ ಆಟಗಾರರಿಗೆ ಕೋವಿಡ್-19 ಪರೀಕ್ಷೆ ನಡೆಸಲು ಮುಂದಾಗಿದೆ.

ಕಳೆದ ವಾರ ಕೊರೋನ ಸೋಂಕಿಗೆ ಒಳಗಾಗಿರುವ ಪಾಕ್‌ನ 10 ಆಟಗಾರರ ಪೈಕಿ ನಾಲ್ವರು ಆಟಗಾರರು ಇನ್ನೂ ಗುಣಮುಖ ರಾಗಿಲ್ಲ. ಅವರೆಲ್ಲರೂ ಪಾಕಿಸ್ತಾನದಲ್ಲೇ ಉಳಿದು ಕೊಂಡಿದ್ದಾರೆ.

ಮುಹಮ್ಮದ್ ಹಫೀಝ್, ವಹಾಬ್ ರಿಯಾಝ್, ಮುಹಮ್ಮದ್ ಹಸನೈನ್, ಶಾದಾಬ್ ಖಾನ್, ಮುಹಮ್ಮದ್ ರಿಝ್ವನ್ ಹಾಗೂ ಫಖರ್ ಝಮಾನ್ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸ ಕೈಗೊಳ್ಳಲು ಅರ್ಹರಾಗಿದ್ದಾರೆ. ಇವರೆಲ್ಲರೂ ರವಿವಾರ ಪಾಕ್‌ನಿಂದ ಹೊರಟಿರುವ ತಂಡವನ್ನು ಶೀಘ್ರವೇ ಸೇರಿಕೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ಜೂನ್ 26ರಂದು ನಡೆಸಲಾಗಿರುವ ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ಬಂದ ಬಳಿಕ ಎಲ್ಲ ಆರು ಆಟಗಾರರನ್ನು ಸೋಮವಾರ ಮತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಪಿಸಿಬಿ ದೃಢಪಡಿಸಿದೆ. ಇದೇ ವೇಳೆ, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಹೈದರ್ ಅಲಿ ಹಾಗೂ ಹಾರಿಸ್ ರವೂಫ್ ಕೊರೋನ ಪರೀಕ್ಷೆಯಲ್ಲಿ ಎರಡನೇ ಬಾರಿ ಪಾಸಿಟಿವ್ ವರದಿ ಬಂದಿದೆ. ಇವರೆಲ್ಲರೂ ಸತತ ಎರಡು ಬಾರಿ ನೆಗೆಟಿವ್ ವರದಿ ಸ್ವೀಕರಿಸುವ ತನಕ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲಾಗುವುದಿಲ್ಲ.

ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಆಗಸ್ಟ್ ನಿಂದ ಆರಂಭವಾಗಲಿರುವ ಮೂರು ಟೆಸ್ಟ್ ಹಾಗೂ ಮೂರು ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯಲ್ಲಿ ಆಡಲಿದೆ. ಆದರೆ, ಸರಣಿ ಆರಂಭಕ್ಕೆ ಖಚಿತವಾದ ದಿನಾಂಕ ಇನ್ನೂ ಅಂತಿಮವಾಗಿಲ್ಲ.

ಪಾಕಿಸ್ತಾನ ತಂಡ ರವಿವಾರ ಇಂಗ್ಲೆಂಡ್ ತಲುಪಿದ್ದು, ಅಂತರ್-ತಂಡಗಳ ಅಭ್ಯಾಸ ಪಂದ್ಯಕ್ಕೆ ಮೊದಲು 14 ದಿನಗಳ ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಪೂರೈಸಲಿದೆ.

30 ಸದಸ್ಯರುಗಳನ್ನು ಒಳಗೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡ ಹಾಗೂ ಸಹಾಯಕ ಸಿಬ್ಬಂದಿ ವೆಸ್ಟ್ ಇಂಡೀಸ್ ವಿರುದ್ಧ ಮುಂದಿನ ವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕಿಂತ ಮೊದಲು ಅಗಾಸ್ ಬೌಲ್‌ನಲ್ಲಿ ಜೈವಿಕ-ಸುರಕ್ಷಿತ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದೆ.

 ಇಂಗ್ಲೆಂಡ್-ವೆಸ್ಟ್‌ಇಂಡೀಸ್ ನಡುವಿನ 3 ಪಂದ್ಯಗಳ ಸರಣಿಯ ಮೊದಲ ಪಂದ್ಯವು ಲಾಕ್‌ಡೌನ್ ಬಳಿಕ ಪುನರಾರಂಭವಾಗುತ್ತಿರುವ ಮೊದಲ ಪ್ರಮುಖ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News