ಅಭ್ಯಾಸಕ್ಕೆ ಮರಳಿದ ಆಫ್ರಿಕಾದ ಡಿಕಾಕ್ ಬಳಗ

Update: 2020-07-01 05:56 GMT

ಜೋಹಾನ್ಸ್‌ಬರ್ಗ್: ಕ್ವಿಂಟನ್ ಡಿ ಕಾಕ್ ನೇತೃತ್ವದ ದಕ್ಷಿಣ ಆಫ್ರಿಕಾದ 44 ಕ್ರಿಕೆಟಿಗರು ದೇಶದ ಕ್ರೀಡಾ ಸಚಿವಾಲಯದಿಂದ ಅನುಮೋದನೆ ಪಡೆದ ನಂತರ ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಉಂಟಾಗಿರುವ ಪರಿಸ್ಥಿತಿಯ ನಡುವೆಯೂ ಅಭ್ಯಾಸಕ್ಕೆ ಮರಳಿದ್ದಾರೆ.

 ದೇಶೀಯ ಏಕದಿನ ಟೂರ್ನಮೆಂಟ್ ನಡೆಯುತ್ತಿದ್ದಾಗಲೇ ಮಾರ್ಚ್ 15 ರಿಂದ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅದೇ ಸಮಯದಲ್ಲಿ ಪುರುಷರ ರಾಷ್ಟ್ರೀಯ ತಂಡವು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತದಲ್ಲಿ ಪ್ರವಾಸದಲ್ಲಿತ್ತು, ಕೋವಿಡ್ -19 ಕಾರಣದಿಂದಾಗಿ ಸರಣಿಯನ್ನು ಮುಂದೂಡಬೇಕಾಯಿತು.

  ದಕ್ಷಿಣ ಆಫ್ರಿಕಾದಲ್ಲಿ 1,38,000 ಕ್ಕೂ ಹೆಚ್ಚು ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 2,400ಕ್ಕೂ ಹೆಚ್ಚು ಜನ ಸಾವನ್ನ ಪ್ಪಿದ್ದಾರೆ.

  ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಪ್ರಕಾರ ಆಟಗಾರರು ತಮ್ಮ ಫ್ರಾಂಚೈಸಿ ತಂಡಗಳಿಂದ ಗುರುತಿಸಲ್ಪಟ್ಟ ತರಬೇತುದಾರರೊಂದಿಗೆ ಸಣ್ಣ ಗುಂಪುಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಭ್ಯಾಸ ಸಿಎಸ್‌ಎ ಕೋವಿಡ್ -19 ಸ್ಟೀರಿಂಗ್ ಸಮಿತಿಯು ನಿಗದಿಪಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತವೆ ಮತ್ತು ರಾಷ್ಟ್ರೀಯ ಸಂವಹನ ರೋಗಗಳ ಸಂಸ್ಥೆ (ಎನ್‌ಐಸಿಡಿ) ಅನುಮೋದನೆಗೊಳಪಟ್ಟಿದೆ.

 ‘‘ ನಮ್ಮ ತಡೆಗಟ್ಟುವ ಕಾರ್ಯಕ್ರಮವು ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ನಿಯಮಿತವಾಗಿ ಪರೀಕ್ಷಿಸುವುದರ ಜೊತೆಗೆ, ವೈಯಕ್ತಿಕ ನೈರ್ಮಲ್ಯ ಕ್ರಮಗಳ ಮೇಲೆ ನಿಗಾವಹಿಸುವುದು. ಸ್ವಚ್ಛ ಪರಿಸರ ವ್ಯವಸ್ಥೆಯನ್ನು ರಚಿಸುವುದಾಗಿ ಎಂದು ಸಿಎಸ್‌ಎ ಮುಖ್ಯ ವೈದ್ಯಕೀಯ ಅಧಿಕಾರಿ ಶುಐಬ್ ಮಂಜ್ರಾ ಹೇಳಿದರು.

ಪ್ರತಿ ಸ್ಥಳದಲ್ಲಿ ಕೋವಿಡ್-19 ಅನುಸರಣೆ ವ್ಯವಸ್ಥಾಪಕರು ಪ್ರೊಟೊಕಾಲ್‌ನ ಎಲ್ಲಾ ಅಂಶಗಳನ್ನು ಕಾರ್ಯಗತ ಗೊಳಿಸುವುದನ್ನು ದೃಢಪಡಿಸಿ ಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

 ಮಹಿಳಾ ಕ್ರಿಕೆಟ್ ತಂಡಕ್ಕೆ ತರಬೇತಿ ಪ್ರಾರಂಭಿಸುವ ಯೋಜನೆಗಳನ್ನು ಇನ್ನೂ ಚರ್ಚಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News