ಯುವಕರ ಆಸಕ್ತಿಯಿಂದ ಕುಲಕಸುಬು ಅಭಿವೃದ್ಧಿ ಸಾಧ್ಯ : ಬೆನೆಟ್ ಜಿ. ಅಮ್ಮನ್ನ
ಮಂಗಳೂರು: ಯುವಕರಲ್ಲಿ ಕುಲಕಸುಬಿನ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಹಿಂದೆ ಮನೆಯಲ್ಲೇ ನಡೆಯುತ್ತಿದ್ದ ಕುಲಕಸುಬುಗಳು ಯಾವುದೋ ಮ್ಯೂಸಿಯಂಗಳಲ್ಲಿ ಹೋಗಿ ಪರಿಚಯಿಸಿಕೊಳ್ಳುವ ಮಟ್ಟಕ್ಕೆ ಅಳಿವಿನಂಚನಲ್ಲಿದೆ ಎಂದು ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಬಲ್ಮಠದ ಪತ್ರಗಾರ ಸಹಾಯಕ ಬೆನೆಟ್ ಜಿ. ಅಮ್ಮನ್ನ ವಿಷಾದ ವ್ಯಕ್ತಪಡಿಸಿದರು.
ಮಂಗಳೂರು ವಿಶ್ವವಿದ್ಯಾಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ ಮತ್ತು ಮಂಗಳೂರು ವಿಶ್ವವಿದ್ಯಾಲಯ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ ಗೂಗ್ಲ್ ಮೀಟ್ ಆ್ಯಪ್ ಮೂಲಕ ಪರಂಪರೆಡ್ದ್ ಆಧುನಿಕತೆತ್ತಂಚಿ ಕುಲಕಸುಬು ವಿಷಯದ ಕುರಿತು ಸರಣಿ ಉಪನ್ಯಾಸ 4 ಕಾರ್ಯಕ್ರಮದಲ್ಲಿ ಮಾತನಾಡಿದರು.
150 ವರ್ಷಗಳ ಹಿಂದೆ ಹೆಚ್ಚಿನ ಮನೆಗಳಲ್ಲಿ ಮಗ್ಗದ ಕೆಲಸ ನಡೆಯುತ್ತಿತ್ತು. ಆದರೆ ಈಗ ಅದನ್ನು ನೋಡಲು ಪಿಲಿಕುಳಕ್ಕೆ ಹೋಗಬೇಕಾಗಿದೆ. ಮಣ್ಣಿನ ದಿನಬಳಕೆಯ ವಸ್ತು ಮತ್ತು ಮನುಷ್ಯನಿಗೆ ತೀರ ಸಮೀಪದ ಸಂಬಂಧವಿತ್ತು. ಬಸವಣ್ಣನ ಅನುಭವ ಮಂಟಪದಲ್ಲೂ ಹಲವಾರು ಕುಲಕಸುಬಿನ ಉಲ್ಲೇಖವಿದೆ. ಶ್ರಮಪಟ್ಟು ಮಾಡುವ ಯಾವುದೇ ವೃತ್ತಿ ಕನಿಷ್ಠವಲ್ಲ. ಕೀಳರಿಮೆ ಬಿಟ್ಟು ಸಾಂಪ್ರದಾಯಿಕ ಕುಲಕಸುಬುಗಳನ್ನು ಉಳಿಸುವ ಜವಾಬ್ದಾರಿ ಮನ್ನೆಲರ ಮೇಲಿದೆ ಎಂದು ತಿಳಿಸಿದರು.
ಕೊಣಾಜೆ ವಿಕಾಸ್ ಇಂಡಸ್ಟ್ರೀಸ್ ಮಾಲಕ ಕಲ್ಲಿಮಾರುಗುತ್ತು ಲಯನ್ ಪ್ರಸಾದ್ ರೈ ಮಾತನಾಡಿ, ಆಧುನಿಕತೆಯಿಂದ ನಮ್ಮ ಸಾಂಪ್ರದಾಯಿಕ ಕುಲಕಸುಬುಗಳು ವಿನಾಶದ ಅಂಚಿಗೆ ಸರಿಯುತ್ತಿದೆ ಎಂದರು. ವಿಶ್ವವಿದ್ಯಾಲಯ ಸಂಧ್ಯಾಕಾಲೇಜು ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು.