ಮಾಲ್, ಹೊಟೇಲ್, ಬಸ್ ಸಿಬ್ಬಂದಿಗಳಿಗೆ ಕೊರೋನ ಪರೀಕ್ಷೆ : ಉಡುಪಿ ಡಿಸಿ ಜಗದೀಶ್
ಉಡುಪಿ, ಜು.1: ಹೆಚ್ಚು ಜನ ಸೇರುವಲ್ಲಿ ಕೊರೋನ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣಕ್ಕಾಗಿ ಸರಕಾರದ ಸೂಚನೆಯಂತೆ ಮಾಲ್, ಶಾಂಪಿಂಗ್ ಕಾಂಪ್ಲೆಕ್ಸ್, ಅಂಗಡಿ ಮುಗ್ಗಟ್ಟು, ಆಹಾರ ವಿತರಕ ಸಂಸ್ಥೆಗಳು, ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿರುವವರು ಮತ್ತು ಬಸ್ ಚಾಲಕರು ಗಳನ್ನು ಕೊರೋನ ಪರೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್‌ಗಳ 600 ಮಂದಿ ಚಾಲಕರು ಮತ್ತು ನಿರ್ವಹಕರನ್ನು ಕೊರೋನ ಪರೀಕ್ಷೆಗೆ ಒಳಪಡಿಸಲಾಗುವುದು. ಇವರೆಲ್ಲ ಆಯಾ ತಾಲೂಕು ವ್ಯಾಪ್ತಿಯ ಆರೋಗ್ಯಾಧಿಕಾರಿ ಗಳನ್ನು ಸಂಪರ್ಕಿಸಿ, ದಿನಾಂಕ ವನ್ನು ನಿಗದಿಪಡಿಸಿಕೊಂಡು ಫೀವರ್ ಕ್ಲಿನಿಕ್‌ನಲ್ಲಿ ತಪಾಸೆ ಮಾಡಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಐಸಿಯುನಲ್ಲಿ ನಾಲ್ಕು ಮಂದಿ ಕೊರೋನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಮೂವರು ಚೇತರಿಸಿಕೊಂಡಿದ್ದಾರೆ. ಒಬ್ಬರು ಗಂಭೀರ ವಾಗಿದ್ದರೂ ಶೇ.25ರಷ್ಟು ಇಂಪ್ರೂವ್ ಆಗಿದ್ದಾರೆ ಎಂದ ಅವರು, ಉಡುಪಿ ಜಿಲ್ಲೆಯಲ್ಲಿ ಆಸ್ಪತ್ರೆಗೆ ಬಂದ ನಂತರ ಒಂದೇ ಒಂದು ಕೊರೋನ ಸಂಬಂಧ ಸಾವು ಸಂಭವಿಸಿಲ್ಲ. ಆದುದರಿಂದ ಕೆಮ್ಮು ಜ್ವರಗಳಿದ್ದರೆ ಮನೆಯಲ್ಲಿ ಕೂರದೇ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು ಎಂದರು.
ಎಸೆಸೆಲ್ಸಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಕೊರೋನ ಹರಡಿದೆ ಎಂಬುದಕ್ಕೆ ಯಾವುದೇ ಕುರುಹುಗಳಿಲ್ಲ. ಆ ರೀತಿ ಆಗದಂತೆ ಎಲ್ಲವೂ ಶಿಸ್ತು ಬದ್ಧವಾಗಿ ಹಾಗೂ ಸುರಕ್ಷಿತ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಬೀಚ್ ತೆರೆದ್ದರೂ ಮಕ್ಕಳು ಹಾಗೂ ಹಿರಿಯರಿಗೆ ಅಲ್ಲಿ ಪ್ರವೇಶ ಇರುವುದಿಲ್ಲ. ಈ ಸಂದರ್ಭದಲ್ಲಿ ಪ್ರವಾಸಿಗರನ್ನು ನಿರ್ವಹಣೆ ಮಾಡುವುದು ತುಂಬಾ ಕಷ್ಟ ಆಗುವುದರಿಂದ ಸದ್ಯಕ್ಕೆ ಹೊರಗಿನ ಪ್ರವಾಸಿಗರು ಜಿಲ್ಲೆಗೆ ಬರುವುದು ಬೇಡ. ಅಗತ್ಯ ಇದ್ದರೆ ಮಾತ್ರ ಪ್ರಯಾಣ ಮಾಡಬೇಕು. ಅನಾವಶ್ಯಕವಾಗಿ ಯಾರು ಕೂಡ ಪ್ರಯಾಣ ಮಾಡುವುದು ಬೇಡ ಎಂದು ಅವರು ತಿಳಿಸಿದರು.