“ನಿಮ್ಮಲ್ಲಿ ಅನುಕಂಪ ಎಂಬುದು ಇಲ್ಲವೇ?”: ಸಂಬಿತ್ ಪಾತ್ರಾ ವಿರುದ್ಧ ಟ್ವಿಟರಿಗರ ಆಕ್ರೋಶ

Update: 2020-07-01 12:32 GMT

ಹೊಸದಿಲ್ಲಿ : ಬುಧವಾರ ಕಾಶ್ಮೀರದ ಸೋಪೋರ್ ಎಂಬಲ್ಲಿ ಉಗ್ರರ ಗುಂಡಿನ ದಾಳಿಗೆ 60 ವರ್ಷದ ನಾಗರಿಕರೊಬ್ಬರು ಮೃತಪಟ್ಟಿದ್ದು, ಅವರ 3 ವರ್ಷದ ಮೊಮ್ಮಗ ಅಜ್ಜನ ಮೃತದೇಹದ ಮೇಲೆ ಕುಳಿತು ಅಳುತ್ತಿರುವ ಚಿತ್ರ ಎಲ್ಲರ ಮನಕಲಕಿತ್ತು. ಈ ನಡುವೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಈ ಚಿತ್ರದ ಬಗ್ಗೆ ಮಾಡಿರುವ ಟ್ವೀಟ್ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಫೋಟೊವನ್ನು ಟ್ವೀಟ್ ಮಾಡಿದ್ದ ಸಂಬಿತ್ ಪಾತ್ರಾ ಅದರ ಕೆಳಗೆ `ಪುಲಿಟ್ಝರ್ ಲವರ್ಸ್?'' ಎಂದು ಬರೆದಿದ್ದರು. ಬಹುತೇಕ ಟ್ವಿಟ್ಟರಿಗರಿಗೆ ಪಾತ್ರ ಅವರ ಈ ಕಮೆಂಟ್ ಇಷ್ಟಗಾಗಿಲ್ಲ. ಬಾಲಿವುಡ್ ನಟಿ ದಿಯಾ ಮಿರ್ಝಾ ಟ್ವಿಟ್ ಮಾಡಿ , “ನಿಮ್ಮಲ್ಲಿ ಅನುಕಂಪ ಎಂಬುದು ಒಂದಿನಿತೂ ಇಲ್ಲವೇ?'' ಎಂದು ಪ್ರಶ್ನಿಸಿದರೆ ಹನ್ಸಲ್ ಮೆಹ್ತಾ ಎಂಬವರು ಟ್ವೀಟ್ ಮಾಡಿ, “ಈ ವ್ಯಕ್ತಿ ಆಡಳಿತ ಪಕ್ಷದ ವಕ್ತಾರನಾಗಿದ್ದರೂ  ಟ್ರೋಲ್ ಅಲ್ಲದೆ ಮತ್ತಿನ್ನೇನಲ್ಲ'' ಎಂದು ಬರೆದಿದ್ದಾರೆ.

ಶಾಸಕ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿ ``ಇದು ಶಾಖಾ ವರ್ತನೆಯ ಮಟ್ಟ. ಮೊದಲು ಸಂವಿಧಾನದ 370ನೇ ವಿಧಿಯನ್ನು ಅಪ್ರಜಾಸತ್ತಾತ್ಮಕವಾಗಿ ತೆಗೆದು ಹಾಕುವುದು ಹಾಗೂ ಇದು ಅಂತಿಮವಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೆಂದು ಭರವಸೆ ನೀಡುವುದು, ನಂತರ ಕಾಶ್ಮೀರಿ ನಾಗರಿಕನ ಸಾವು ಹಾಗೂ ಅಳುತ್ತಿರುವ ಮಗುವನ್ನು ಅಣಕವಾಡುವುದು. ಈಗ ಅಲ್ಲಿ ಶಾಂತಿಯೂ ಇಲ್ಲ, ನೀವು ಲಜ್ಜೆಗೆಟ್ಟವರೆಂದೂ ಸಾಬೀತು ಪಡಿಸಿದ್ದೀರಿ'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News