ಕೊರೋನ ವಾರಿಯರ್ಸ್‌ಗಳಿಗೆ ಸೋಂಕು ತಗಲದಂತೆ ಹೆಚ್ಚಿನ ತರಬೇತಿ: ವೈದ್ಯರ ದಿನಾಚರಣೆಯಲ್ಲಿ ಉಡುಪಿ ಡಿಸಿ

Update: 2020-07-01 12:31 GMT

‌ಉಡುಪಿ, ಜು.1: ಉಡುಪಿ ಜಿಲ್ಲೆಯ ಕೊರೋನ ವಾರಿಯರ್ಸ್‌ಗಳಿಗೆ ಹೆಚ್ಚಿನ ತರಬೇತಿ ನೀಡುವ ಮೂಲಕ ಅವರಿಗೆ ಕೊರೋನ ಸೋಂಕು ತಗಲ ದಂತೆ ತಡೆಯಬೇಕಾಗಿದೆ. ಈ ಮೂಲಕ ನಮ್ಮ ಜಿಲ್ಲೆ ಇಡೀ ದೇಶಕ್ಕೆ ಮಾದರಿ ಯಾಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಿದರೆ ಕೊರೋನ ವಾರಿಯರ್ಸ್ ಕೊರೋನ ಕೈಗೆ ಸಿಗದಂತೆ ಮಾಡಬಹುದು. ಇದು ನಮ್ಮ ಮುಂದಿರುವ ದೊಡ್ಡ ಸವಾಲು ಆಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ ವತಿಯಿಂದ ಭಾರತ ರತ್ನ ಡಾ.ಬಿ.ಸಿ.ರಾಯ್ ಸ್ಮರಣಾರ್ಥ ಬುಧವಾರ ಉಡುಪಿ ಐಎಂಎ ಭವನದಲ್ಲಿ ಆಯೋಜಿಸಲಾದ ‘ವೈದ್ಯರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕೊರೋನ ಸಮುದಾಯಕ್ಕೆ ಹರಡದಂತೆ ತಡೆಯಲು ನಾವು ಇಂದು ಹೆಚ್ಚು ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಕೊರೋನ ಸೋಂಕಿತರನ್ನು ಆದಷ್ಟು ಬೇಗ ಗುರುತಿಸಿ, ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡಿದರೆ ಸಾವು ಕಡಿಮೆ ಮಾಡಬಹುದು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಲ್ಲ ಸೋಂಕಿತರು ಬದುಕಿ ಬಂದಿರುವುದು ನಮ್ಮ ಜಿಲ್ಲೆಯಲ್ಲಿ ಮಾತ್ರ. ಇದಕ್ಕೆ ವೈದ್ಯರ ತಂಡದ ಶ್ರಮ ಮುಖ್ಯವಾಗಿದೆ. ಈ ಉಡುಪಿ ಮಾಡೆಲ್ ಅನ್ನು ಇತರ ಜಿಲ್ಲೆಯವರು ಕೂಡ ಈಗ ಅನುಸರಿಸುತ್ತಿದ್ದಾರೆ ಎಂದರು.

ಉಡುಪಿಯ ಶಸ್ತ್ರಚಿಕಿತ್ಸಾ ತಜ್ಞ ಡಾ.ವಾಸುದೇವ ಸೋಮಯಾಜಿ, ಕಟಪಾಡಿಯ ವೈದ್ಯ ಡಾ.ಶ್ರೀನಿವಾಸ ರಾವ್ ಕೊರಡ್ಕಲ್ ಅವರನ್ನು ಸಮ್ಮಾನಿಸ ಲಾಯಿತು. ಡಾ.ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ ಡಾ.ಪ್ರಭಾಕರ ಶೆಟ್ಟಿ ಕಾಪು ಹಾಗೂ ಹಿರಿಯ ಸಾಧಕ ವೈದ್ಯ ಡಾ.ರವೀಂದ್ರನಾಥ ಶೆಟ್ಟಿ ಅವರನ್ನು ಅಭಿನಂದಿಸ ಲಾಯಿತು.

ಕೊರೊನಾ ಕೋವಿಡ್-19ರ ವಿರುದ್ಧ ಹೋರಾಡುತ್ತಿರುವ 16 ಮಂದಿ ಐಎಂಎ ಸದಸ್ಯ ವೈದ್ಯರನ್ನು ಗೌರವಿಸಲಾಯಿತು. ಐಎಂಎ ಅಧ್ಯಕ್ಷ ಡಾ. ಉಮೇಶ್ ಪ್ರಭು ಸ್ವಾಗತಿಸಿದರು. ಡಾ.ವಿನಾಯಕ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ.ಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

‘ವಾರಿಯರ್ಸ್‌ಗಳಿಗೆ ಸನ್ಮಾನಿಸುವ ಸಮಯ ಇದಲ್ಲ’ಜಿಲ್ಲೆಯ ಕೆಲವು ಕಡೆಗಳಲ್ಲಿ ಕೊರೋನ ವಾರಿಯರ್ಸ್‌ಗಳಿಗೆ ನಿಯಮಗಳನ್ನು ಗಾಳಿಗೆ ತೂರಿ ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ. ಅದು ನಿಜವಾದ ಸನ್ಮಾನ ಅಲ್ಲ. ಮುಂದೆ ಇಂತಹ ಸನ್ಮಾನ ನಡೆಯಬಾರದು. ನಾವು ಈಗ ಹೋರಾಟದ ಪ್ರಾರಂಭದ ಹಂತದಲ್ಲಿರುವುದರಿಂದ ಕೊರೋನ ವಾರಿಯರ್ಸ್‌ಗಳಿಗೆ ಸನ್ಮಾನ ಮಾಡಲು ಇದು ಸೂಕ್ತ ಸಮಯ ಅಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಕೊರೋನ ವಿರುದ್ಧದ ಹೋರಾಟ ಮುಗಿದ ನಂತರ ಜಿಲ್ಲಾಡಳಿತವೇ ವಾರಿ ಯರ್ಸ್‌ಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಸಲಿದೆ. ಪ್ರಸ್ತುತ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶ ಇಲ್ಲದಿರುವಾಗ ಕೊರೋನ ವಾರಿಯರ್ಸ್ ಗಳ ಸನ್ಮಾನ ಸಮಾರಂಭ ಕೂಡ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News