ಸಂಕಷ್ಟ ಪರಿಸ್ಥಿತಿಯ ನಿಭಾವಣೆಯಲ್ಲಿ ಆರ್ಥಿಕತೆ ಅವಲಂಬಿತ: ಪ್ರೊ. ನರಹರಿ

Update: 2020-07-01 14:53 GMT

ಮಂಗಳೂರು, ಜು.1: ದೇಶದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯದ ಮೇಲೆ ದೇಶದ ಆರ್ಥಿಕತೆ ಅವಲಂಬಿತವಾಗಿರುತ್ತದೆ ಎಂದು ಸಂತ ಅಲೋಶಿಯಸ್ ಕಾಲೇಜಿನ ವಿಶ್ರಾಂತ ರಿಜಿಸ್ಟ್ರಾರ್ ಪ್ರೊ. ಎ.ಎಂ. ನರಹರಿ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿ ಮತ್ತು ಕರ್ನಾಟಕ ಥಿಯೋಲಾಜಿಕಲ್ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಮಂಗಳೂರಿನ ಬಲ್ಮಠದ ಸಹೋದಯ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ಮಂಗಳೂರು ಸಮಾಚಾರ ಪತ್ರಿಕೆಯ ಸ್ಥಾಪಕ ಸಂಪಾದಕ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದೇಶವಿಂದು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ನೋಟ್‌ಬ್ಯಾನ್, ಜಿಎಸ್‌ಟಿಯನ್ನು ನಮ್ಮ ದೇಶದ ಸರಕಾರ ಒಳ್ಳೆಯ ಉದ್ದೇಶದಿಂದಲೇ ಜಾರಿಗೊಳಿ ಸಿತ್ತು. ಅಲ್ಲಿಂದಲೇ ಆರ್ಥಿಕ ಕುಸಿತ ಆರಂಭವಾಗಿದ್ದು, ಕೊರೋನದ ಲಾಕ್‌ಡೌನ್ ಮತ್ತಷ್ಟು ಹೊಡೆತ ನೀಡಿದೆ. ಯಾವುದೇ ಒಂದು ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪರಿಸ್ಥಿತಿ ಆ ದೇಶವು ತನಗೆದುರಾಗುವ ಸಂಕಷ್ಟದ ಪರಿಸ್ಥಿತಿಗಳನ್ನು ನಿಭಾಯಿಸುವುದರ ಮೇಲೆ ನಿರ್ಭರವಾಗಿರುತ್ತದೆ. ಹಾಗಾಗಿ ಈ ಕುರಿತಂತೆ ಆತಂಕ ಭಯದ ಬದಲು ಯಾವ ಮುಂಜಾಗೃತಾ ಕ್ರಮಗಳೊಂದಿಗೆ ಮುಂದೆ ಸಾಗಬೇಕೆಂಬ ಬಗ್ಗೆ ನಿಲುವುಗಳನ್ನು ಕೈಗೊಂಡರೆ ಆರ್ಥಿಕವಾಗಿ ಚೇತರಿಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನದ ಆಶಯಗಳಂತೆ ಜನರ ಪ್ರತಿಕ್ರಿಯೆಗಳಿಗೆ ಧ್ವನಿಯಾಗಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಉತ್ತಮ ನೀತಿಗಳನ್ನು ರೂಪಿಸುವಲ್ಲಿ ಪತ್ರಿಕೋದ್ಯಮದ ಪಾತ್ರ ಬಹು ಮುಖ್ಯ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್ ಮಾತನಾಡಿ, ನಗರದಲ್ಲಿ ರಸ್ತೆಯೊಂದಕ್ಕೆ ಮೊಗ್ಲಿಂಗ್‌ರವರ ನಾಮಕರಣ ಮಾಡುವ ಬಗ್ಗೆ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಅವರು ಮೋಗ್ಲಿಂಗ್ ಪ್ರತಿಮೆಗೆ ಪುಷ್ಪಾರ್ಚೆನೆ  ಮಾಡಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಲಕ್ಷ್ಮಣ್ ಕುಂದರ್ , ಪದಾಧಿಕಾರಿಗಳಾದ ಕೆನ್ಯೂಟ್ ಜೆ ಪಿಂಟೋ , ಗಿರಿಧರ್ ಶೆಟ್ಟಿ, ವಾಯಿಲೆಟ್ ಪಿರೇರಾ , ಈಶ್ವರ್ ವಾರಾಣಸಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News