ಪತ್ರಕರ್ತ ಮುಹಮ್ಮದ್ ಅನ್ಸಾರ್‌ಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ

Update: 2020-07-01 16:12 GMT

ಮಂಗಳೂರು, ಜು.1: ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸುಧಾರಣೆ ಮಾಡುವಲ್ಲಿ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡು ವಲ್ಲಿ ಪತ್ರಕರ್ತರ ಸೇವೆ ಅತ್ಯಂತ ಮಹತ್ವದು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಡಾ. ಪಿ.ಎಲ್. ಧರ್ಮ ಅವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮಂಗಳೂರು ಪ್ರೆಸ್ ಕ್ಲಬ್ ಮತ್ತ ಪತ್ರಿಕಾ ಭವನ ಟ್ರಸ್ಟ್‌ನ ಸಹಯೋಗದಲ್ಲಿ ಬುಧವಾರ ನಗರದ ಲೇಡಿಹಿಲ್‌ನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿದರು.

21 ನೇ ಶತಮಾನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮೊದಲ 10 ಆದ್ಯತೆಗಳಲ್ಲಿ ಮಾಹಿತಿಯೂ ಒಂದಾಗಿದೆ. ಪತ್ರಿಕೆ/ ಮಾಧ್ಯಮಗಳಿಲ್ಲದೆ ಸಮಾಜಕ್ಕೆ ಯಾವುದನ್ನೂ ಕಲಿಯಲು ಸಾಧ್ಯವಿಲ್ಲ. ಪತ್ರಕರ್ತರಿಂದ ಚರಿತ್ರೆ, ಭಾಷೆ ಪುನಾರಚನೆಯಾಗಿದೆ. ಪತ್ರಕರ್ತರು ಬರೆಯುವಾಗ ಸಣ್ಣ ತಪ್ಪುಗಳನ್ನು ಮಾಡುವುದು ಸಹಜ. ಆದರೆ ಪುನರಪಿ ತಪ್ಪು ಮಾಡ ಬಾರದು. ಸಂಶೋಧನೆ ಮಾಡಿ ಬರೆಯ ಬೇಕು. ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು ಎಂದವರು ಸಲಹೆ ಮಾಡಿದರು.

ಪತ್ರಕರ್ತ ಮುಹಮ್ಮದ್ ಅನ್ಸಾರ್  ಅವರ ‘ಸಂಬಂಧ ಗಟ್ಟಿಗೊಳಿಸಿದ ರಮಝಾನ್’ ಎಂಬ ವರದಿಗೆ ಈ ವರ್ಷದ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಲಭಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮೆಸ್ಕಾಂ ಪ್ರಧಾನ ವ್ಯವಸ್ಥಾಪಕ ಎಚ್.ಕೆ. ಕೃಷ್ಣ ಮೂರ್ತಿ ಅವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಪ್ರಶಸ್ತಿಯು 5001 ರೂ. ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ದೇಶದ ಮತ್ತು ಸಮಾಜದ ಸೇವಕರಲ್ಲಿ ಪತ್ರಕರ್ತರೂ ಒಬ್ಬರಾಗಿದ್ದಾರೆ. ಹಲವಾರು ಸವಾಲುಗಳ ನಡುವೆಯೂ ಕೆಲಸ ನಿರ್ವಹಿಸುವ ಅವರಿಗೆ ಸೆಲ್ಯೂಟ್ ಎಂದು ಎಚ್.ಕೆ. ಕೃಷ್ಣ ಮೂರ್ತಿ ಅವರು ಪತ್ರಿಕಾ ದಿನಾಚರಣೆ ಶುಭಾಶಯ ಸಲ್ಲಿಸಿದರು.

ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆ ಅವರು ‘ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಪ್ರಸ್ತುತತೆ’ ಎಂಬ ವಿಷಯದ ಕುರಿತು ಮಾತನಾಡಿದರು. ಪತ್ರಕರ್ತರು ಪ್ರಸ್ತುತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಮ್ಮ ಆರ್ಥಿಕ ಭದ್ರತೆಗಾಗಿ ಉಳಿತಾಯ ಮನೋಭಾವವ್ನು ಬೆಳೆಸಿಕೊಳ್ಳ ಬೇಕು ಎಂದರು. ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಯ ತೀರ್ಪುಗಾರರಲ್ಲೊಬ್ಬರಾದ ಸ್ಮಿತಾ ಶೆಣೈ ಅನಿಸಿಕೆ ವ್ಯಕ್ತಪಡಿಸಿದರು. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಪ್ರಶಸ್ತಿ ಪತ್ರ ವಾಚಿಸಿದರು.ಪತ್ರಕರ್ತ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News