ದ.ಕ. ಜಿಲ್ಲೆ: ಏಳು ದಿನದ ಮಗು ಸಹಿತ 84 ಮಂದಿಗೆ ಕೊರೋನ ಪಾಸಿಟಿವ್

Update: 2020-07-01 15:27 GMT

ಮಂಗಳೂರು, ಜು.1: ದ.ಕ. ಜಿಲ್ಲೆಯಲ್ಲಿ ಗಣನೀಯವಾಗಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಬುಧವಾರ ಬರೋಬ್ಬರಿ 84 ಮಂದಿಗೆ ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಇದು ಎರಡನೇ ಬಾರಿ ಅತಿಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದು, ಜೂ.28ರಂದು 97 ಮಂದಿಗೆ ಸೋಂಕು ತಗುಲಿತ್ತು. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 883ಕ್ಕೆ ಏರಿಕೆಯಾಗಿದೆ. ಇದರಲ್ಲಿ 10 ಮಂದಿ ಹೊರಜಿಲ್ಲೆಯವರಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕು ಗಂಭೀರ ಪರಿಸ್ಥಿತಿಗೆ ತಲುಪುತ್ತಿದೆ. ಮೂಲ ಪತ್ತೆಯಾಗದೇ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಕೊರೋನವು ಸಮುದಾಯಕ್ಕೆ ಹಬ್ಬುತ್ತಿರುವ ಲಕ್ಷಣವಾಗಿದೆ. ಇದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಕೊರೋನವು ಸರಣಿ ರೂಪದಲ್ಲಿ ವ್ಯಾಪಕಗೊಳ್ಳುತ್ತಿರುವುದು ಸಾರ್ವಜನಿಕ ಕಳವಳಕ್ಕೂ ಕಾರಣವಾಗಿದೆ.

ಸೋಂಕಿತರ ಪೈಕಿ ಶಾರ್ಜಾದಿಂದ ಆರು, ಅಂತರಾಜ್ಯ ಒಂದು, ಐಎಲ್‌ಐ 28, ಮೂಲ ಪತ್ತೆಯಾಗದ 11, ಪ್ರಾಥಮಿಕ ಸಂಪರ್ಕದಲ್ಲಿದ್ದ 38 ಮಂದಿಗೆ ಸೋಂಕು ತಗುಲಿದೆ. ಎಲ್ಲ ಸೋಂಕಿತರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಯುವಕರಲ್ಲಿ ಸೋಂಕು: ಸೋಂಕಿತರ ಸಂಪರ್ಕದಲ್ಲಿದ್ದ ಏಳು ದಿನದ ಗಂಡು ಮಗು, 1, 4, 12, 16, 17, 17 ವರ್ಷದ ಬಾಲಕರು, 13, 14, 16 ವರ್ಷದ ಬಾಲಕಿಯರು ಹಾಗೂ 60, 60, 62 ವೃದ್ಧರಿಗೆ ಸೋಂಕು ತಗುಲಿದೆ. ಸೋಂಕಿತರ ಪೈಕಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸಮಾಧಾನಕರ ಬೆಳವಣಿಗೆಯಲ್ಲಿ ಬುಧವಾರ 71 ವರ್ಷದ ವೃದ್ಧರೋರ್ವರು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 444 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ವಾರ್ಡ್‌ಗೆ ಇಬ್ಬರ ಸ್ಥಳಾಂತರ: 49 ವರ್ಷದ ವ್ಯಕ್ತಿಯು ಡಯಾಬಿಟಿಸ್‌ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದು, ಇವರನ್ನು ಐಸಿಯುನಲ್ಲಿ ದಾಖಲಿಸಿ, ಎಚ್‌ಎಫ್‌ಎನ್‌ಸಿ ಮೂಲಕ ಆಮ್ಲಜನಕ ನೀಡಲಾಗುತ್ತಿತ್ತು. ಅಲ್ಲದೆ, 39 ವರ್ಷದ ಪುರುಷ ನ್ಯುಮೋನಿಯದಿಂದ ಬಳಲುತ್ತಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಆರೋಗ್ಯ ಸ್ಥಿತಿ ಸುಧಾರಿಸಿದ್ದರಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

57 ವರ್ಷದ ಹೆಂಗಸನ್ನು ಲಿವರ್ ಕಾಯಿಲೆ, ಡಯಾಬಿಟಿಸ್, ಹೃದಯರೋಗ ಹಾಗೂ ನ್ಯುಮೋನಿಯದಿಂದ ಬಳಲುತ್ತಿದ್ದಾರೆ. ಇನ್ನು 78 ವರ್ಷದ ವೃದ್ಧನನ್ನು ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪಾರ್ಕಿನ್‌ಸನ್ ಕಾಯಿಲೆ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದಾರೆ. 52 ವರ್ಷದ ಮಹಿಳೆಯು ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇವರನ್ನೂ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬುಧವಾರ ಒಟ್ಟು 145 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 84 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 381 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 264 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ.

ದ.ಕ.: ಕೊರೋನ ಸೋಂಕಿಗೆ ಮೂವರು ಬಲಿ

ಬುಧವಾರ ಒಂದೇ ದಿನ ಮೂರು ಮಂದಿ ಮೃತಪಟ್ಟಿದ್ದರೆ, ಬರೋಬ್ಬರಿ 84 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ ಬೆಂಗ್ರೆ ನಿವಾಸಿ 71 ವರ್ಷದ ವೃದ್ಧ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 31 ವರ್ಷದ ಯುವಕ ಹಾಗೂ 79 ವರ್ಷದ ವೃದ್ಧ ಬುಧವಾರ ಮೃತಪಟ್ಟಿದ್ದಾರೆ.

ಬೆಂಗ್ರೆಯ 71 ವರ್ಷದ ವೃದ್ಧ ಡಯಾಬಿಟಿಸ್ ಮತ್ತು ನ್ಯುಮೋನಿಯ ರೋಗದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಕೊರೋನ ಪರೀಕ್ಷೆ ವೇಳೆ ಸೋಂಕು ಇರುವುದು ದೃಢಪಟ್ಟಿತ್ತು.

31 ವರ್ಷದ ಭಟ್ಕಳದ ಯುವಕ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರು ಮೃತಪಟ್ಟ ಬಳಿಕ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿದೆ. ಅದೇ ರೀತಿ ಕೊರೋನ ಸೋಂಕಿತ ಭಟ್ಕಳದ 79ರ ಹರೆಯದ ವೃದ್ಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅಂತರದಲ್ಲಿ ಸಂಭವಿಸಿದ 7ನೇ ದುರ್ಘಟನೆ ಇದಾಗಿದೆ. ಈ ಮೂವರ ಸಾವಿನೊಂದಿಗೆ ಇದುವರೆಗೆ ಕೊರೋನದಿಂದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ.

ಅಂತ್ಯಸಂಸ್ಕಾರ: ಬುಧವಾರ ಮೃತಪಟ್ಟ ಮೂವರನ್ನು ಕೊವೀಡ್ ಮಾರ್ಗಸೂಚಿಯಂತೆ ಜಿಲ್ಲಾಡಳಿತದಿಂದ ಅಂತ್ಯಸಂಸ್ಕಾರ ನೆರವೇರಿಸಲಾ ಯಿತು.

ಪೊಲೀಸ್, ವೈದ್ಯರನ್ನೂ ಬೆಂಬಿಡದ ಸೋಂಕು

ದ.ಕ. ಜಿಲ್ಲೆಯನ್ನೇ ತಲ್ಲಣಗೊಳಿಸಿದ ಕೊರೋನ ಸೋಂಕು ಕೊರೋನ ವಾರಿಯರ್ಸ್‌ಗಳನ್ನೂ ಬೆಂಬಿಡದೆ ಕಾಡುತ್ತಿದೆ. ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಆರೈಕೆ ಮಾಡುವ ನರ್ಸ್‌ಗಳೂ, ವೈದ್ಯರು ಕೂಡ ಈ ಸೋಂಕಿನಿಂದ ತತ್ತರಿಸಿ ಹೋಗಿದ್ದಾರೆ. ಮಂಗಳೂರಿನಲ್ಲಿ ಇಲ್ಲಿಯವರೆಗೆ ಸುಮಾರು 12ಕ್ಕೂ ಹೆಚ್ಚು ಮಂದಿ ವೈದ್ಯರಲ್ಲಿ ಈ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ ಈಗ ಪೊಲೀಸರನ್ನೂ ಇನ್ನಿಲ್ಲದಂತೆ ಕಾಡಿಸುತ್ತಿದೆ.

ಜಿಲ್ಲೆಯಲ್ಲಿ ಇದುವರೆಗೆ ಎಸ್‌ಐ, ಎಸ್‌ಎಸ್ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿಯಲ್ಲಿ ಈ ಸೋಂಕು ಕಂಡುಬಂದಿತ್ತು. ಬುಧವಾರ ಎಸಿಪಿ ಯೊಬ್ಬರಲ್ಲಿ ಈ ಸೋಂಕು ಕಂಡುಬಂದಿದೆ. ಅಲ್ಲದೆ, ಪುತ್ತೂರು ಠಾಣೆಯ ಮಹಿಳಾ ಸಿಬ್ಬಂದಿಯಲ್ಲೂ ಸೋಂಕು ಪತ್ತೆಯಾಗಿದೆ. ಉಳ್ಳಾಲದಲ್ಲಿ ಠಾಣಾಧಿಕಾರಿ ಸಹಿತ 12 ಮಂದಿ ಪೊಲೀಸರಿಗೆ ಸೋಂಕು ತಗುಲಿದೆ.

ಏತನ್ಮಧ್ಯೆ, ಮಂಗಳೂರು ಎಸಿಪಿ ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ನಗರದಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಉಳ್ಳಾಲ ಹೊರತುಪಡಿಸಿದರೆ, ವಿಟ್ಲ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಸಿಬ್ಬಂದಿಗೆ ಸೋಂಕು ಕಾಣಿಸಿತ್ತು. ಕೊರೋನ ಸೋಂಕಿತ ಎಸಿಪಿಯವರು ಮಂಗಳವಾರ ತಮ್ಮ ವ್ಯಾಪ್ತಿಯ ಠಾಣೆಯೊಂದಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದ್ದು, ಇದೀಗ ಸೋಂಕು ಪತ್ತೆಯಾಗಿರುವುದರಿಂದ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅದರ ಫಲಿತಾಂಶ ಬುಧವಾರ ಬಂದಿದ್ದು, ಒಬ್ಬ ಆರೋಪಿಗೆ ಪಾಸಿಟಿವ್ ಬಂದಿದೆ. ಇದರಿಂದಾಗಿ ಬಜ್ಪೆ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಆರೋಪಿಯನ್ನು ಸೆರೆ ಹಿಡಿದ ಎಂಟು ಮಂದಿ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News