ಆರೆಸ್ಸೆಸ್‌ನ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿದ ಆರೋಪ: ಸಿಆರ್‌ಪಿಎಫ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

Update: 2020-07-01 15:43 GMT

ಹೊಸದಿಲ್ಲಿ, ಜು.1: ಆರೆಸ್ಸೆಸ್‌ನ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ಭಡ್ತಿ ಮತ್ತಿತರ ವಿಷಯಗಳಲ್ಲಿ ಇಂಡಿಯನ್ ಪೊಲೀಸ್ ಸರ್ವಿಸ್(ಐಪಿಎಸ್) ಅಧಿಕಾರಿಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್) ಅಧಿಕಾರಿಗಳನ್ನು ಸಮಾನವಾಗಿ ಕಾಣಬೇಕೆಂಬ ಅಭಿಯಾನವನ್ನು ಬೆಂಬಲಿಸಿದ ಆರೋಪದಲ್ಲಿ ಸಿಆರ್‌ಪಿಎಫ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅರೆಸೇನಾ ಪಡೆಗಳ ಹಿರಿಯ ಹುದ್ದೆಗಳಿಗೆ ಐಪಿಎಸ್ ಅಧಿಕಾರಿಗಳನ್ನು ಮಾತ್ರ ಪರಿಗಣಿಸುವ ವಿಷಯದಲ್ಲಿ ಸಿಆರ್‌ಪಿಎಫ್ ಮತ್ತು ಐಪಿಸಿ ಸಿಬ್ಬಂದಿಗಳ ನಡುವೆ ದೀರ್ಘಾವಧಿಯಿಂದ ಬಿಕ್ಕಟ್ಟು ಮುಂದುವರಿದಿದೆ. ಇದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡಾ ಆರಂಭವಾಗಿದೆ. ಆರೆಸ್ಸೆಸ್‌ನ ಹೆಸರಲ್ಲಿ ನಕಲಿ ಟ್ವಿಟರ್ ಖಾತೆ ಆರಂಭಿಸಿ ಸಮಾನತೆ ಅಭಿಯಾನವನ್ನು ಬೆಂಬಲಿಸುವ ಮೂಲಕ ಪೊಲೀಸ್ ಪಡೆಯೊಳಗೆ ಅತೃಪ್ತಿ ಮತ್ತು ಅಸಮಾಧಾನ ಸೃಷ್ಟಿಸಲು ಪ್ರಯತ್ನ ನಡೆದಿದೆ ಎಂದು ತಮಿಳುನಾಡಿನ ಶಿವಗಂಗೈ ಪೊಲೀಸ್ ಅಧೀಕ್ಷಕರು ಜೂನ್ 14ರಂದು ದೂರು ನೀಡಿದ್ದಾರೆ ಎಂದು ಸಿಆರ್‌ಪಿಎಫ್ ಪ್ರಧಾನ ನಿರ್ದೇಶಕರು ಹೇಳಿದ್ದಾರೆ.

ಸುದೀರ್ಘಾವಧಿಯ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ದಾರಿ ಸುಗಮವಾದಂತೆಯೇ, ಐಪಿಸಿ ಸಮಾನತೆ ವಿಷಯದಲ್ಲೂ ನ್ಯಾಯ ಸಿಗಬಹುದೇ . ಸತ್ಯಕ್ಕೆ ತೊಂದರೆ ನೀಡಬಹುದು ಆದರೆ ಎಂದಿಗೂ ಸೋಲಿಸಲಾಗದು. ಮೋದಿ ಇದ್ದರೆ ಇದು ಸಾಧ್ಯವಾಗಬಹುದು. ಜೈಶ್ರೀರಾಂ ಎಂಬ ವಿವಾದಾತ್ಮಕ ಪೋಸ್ಟ್ ಅನ್ನು ಬಳಿಕ ಡಿಲೀಟ್ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಅಜ್ಞಾತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಮಧ್ಯೆ, ಸಿಆರ್‌ಪಿಎಫ್‌ನ ಅಸಿಸ್ಟೆಂಟ್ ಕಮಾಂಡೆಂಟ್ ರವಿರಂಜನ್ ಸಿನ್ಹಾ ಎಂಬಾತ ತಾನೇ ಈ ಕೃತ್ಯ ಎಸಗಿದ್ದು ತನಗೆ ನಿರೀಕ್ಷಣಾ ಜಾಮೀನು ಒದಗಿಸುವಂತೆ ಮತ್ತು ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ನಂತರ ಸಿನ್ಹ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News