ಸೈನಿಕರ ಸಾವನ್ನು ಒಪ್ಪಿಕೊಂಡರೆ ಅಶಾಂತಿ ಉಂಟಾಗಬಹುದು ಎಂಬ ಭೀತಿ ಚೀನಾಕ್ಕಿದೆ

Update: 2020-07-01 16:14 GMT

ವಾಶಿಂಗ್ಟನ್, ಜು. 1: ಭಾರತದ ಸೈನಿಕರೊಂದಿಗೆ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಚೀನಾದ ಸೈನಿಕರು ಮೃತಪಟ್ಟಿದ್ದಾರೆ, ಅದರಲ್ಲೂ ಶತ್ರುವಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೈನಿಕರು ಮೃತಪಟ್ಟಿದ್ದಾರೆ ಎನ್ನುವುದನ್ನು ಒಪ್ಪಿಕೊಂಡರೆ, ಅದು ದೇಶದಲ್ಲಿ ಭಾರೀ ಪ್ರಮಾಣದ ಅಶಾಂತಿಗೆ ಕಾರಣವಾಗಬಹುದು ಹಾಗೂ ಅದು ಚೀನಾ ಕಮ್ಯುನಿಸ್ಟ್ ಪಕ್ಷದ ಸರಕಾರವನ್ನು ಅಪಾಯಕ್ಕೂ ಸಿಲುಕಿಸಬಹುದು ಎಂಬ ಭೀತಿಯನ್ನು ಚೀನಾ ಹೊಂದಿದೆ ಎಂದು ಚೀನಾ ಭಿನ್ನಮತೀಯ ಹಾಗೂ ಕಮ್ಯುನಿಸ್ಟ್ ಪಕ್ಷದ ಮಾಜಿ ನಾಯಕರೊಬ್ಬರ ಪುತ್ರ ಜಿಯಾನ್ಲಿ ಯಾಂಗ್ ಅಭಿಪ್ರಾಯಪಟ್ಟಿದ್ದಾರೆ.

ಸರಕಾರವು ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ರೋಸಿಹೋಗಿರುವ ಅತೃಪ್ತ ನಿವೃತ್ತ ಮತ್ತು ಹಾಲಿ ಸೇನಾಧಿಕಾರಿಗಳು ಕ್ಸಿ ಜಿನ್‌ಪಿಂಗ್ ಸರಕಾರದ ವಿರುದ್ಧ ಸಶಸ್ತ್ರ ಸಂಘರ್ಷ ಆರಂಭಿಸುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯವನ್ನು ‘ದ ವಾಶಿಂಗ್ಟನ್ ಪೋಸ್ಟ್’ನಲ್ಲಿ ಬರೆದಿರುವ ಲೇಖನವೊಂದರಲ್ಲಿ ‘ಸಿಟಿಝನ್ ಪವರ್ ಇನಿಶಿಯೇಟಿವ್ಸ್ ಫಾರ್ ಚೀನಾ’ ಎಂಬ ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿರುವ ಯಾಂಗ್ ವ್ಯಕ್ತಪಡಿಸಿದ್ದಾರೆ.

‘‘ಚೀನಾದ ಸೇನೆ ‘ಪೀಪಲ್ಸ್ ಲಿಬರೇಶನ್ ಆರ್ಮಿ’ಯು ತುಂಬಾ ಹಿಂದಿನಿಂದಲೂ ಚೀನಾ ಕಮ್ಯುನಿಸ್ಟ್ ಪಕ್ಷದ ಶಕ್ತಿಯ ಪ್ರಮುಖ ಆಧಾರಸ್ತಂಭವಾಗಿದೆ. ಹಾಲಿ ಸೇನಾ ನಾಯಕರ ಭಾವನೆಗಳಿಗೆ ಧಕ್ಕೆಯಾದರೆ ಹಾಗೂ ಅವರು ಇಂತಹ ಲಕ್ಷಾಂತರ ಅತೃಪ್ತ ಹಿರಿಯ ಸೈನಿಕರೊಂದಿಗೆ ಕೈಜೋಡಿಸಿದರೆ (ಈ ಕಾರ್ಯವನ್ನು ಈಗಾಗಲೇ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಗ್ಗೆ ಅಸಮಾಧಾನ ಹೊಂದಿರುವ ಹಾಗೂ ಈಗಲೂ ಸೇನೆಯಲ್ಲೇ ಇರುವವರು ಮಾಡಬಹುದಾಗಿದೆ. ಇಂಥವರು ಸೇನೆಯಲ್ಲಿ ಸಾವಿರಾರು ಮಂದಿ ಇದ್ದಾರೆ. ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ವಾಣಿಜ್ಯ ಚಟುವಟಿಕೆಗಳಿಂದ ಬೇರ್ಪಡಿಸುವ ಜಿನ್‌ಪಿಂಗ್‌ರ ಕ್ರಮದ ಬಗ್ಗೆ ಭಾರೀ ಸಂಖ್ಯೆಯಲ್ಲಿ ಸೈನಿಕರು ಅಸಮಾಧಾನಗೊಂಡಿದ್ದಾರೆ) ಅದು ಜಿನ್‌ಪಿಂಗ್ ನಾಯಕತ್ವಕ್ಕೆ ಸವಾಲೊಡ್ಡಲು ಸಮರ್ಥವಾದ ಬಲಿಷ್ಠ ಶಕ್ತಿಯಾಗಬಹುದು’’ ಎಂದು ಅವರು ಬರೆದಿದ್ದಾರೆ.

ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಹಾದು ಹೋಗುವ ಭಾರತ-ಚೀನಾ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಜೂನ್ 15ರಂದು ಭಾರತ ಮತ್ತು ಸೈನಿಕರ ನಡುವೆ ನಡೆದ ಭೀಕರ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. 40ಕ್ಕಿಂತಲೂ ಹೆಚ್ಚು ಚೀನಾ ಸೈನಿಕರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಆದರೆ, ತನ್ನ ಸೈನಿಕರ ಸಾವು-ನೋವಿನ ಬಗ್ಗೆ ಚೀನಾ ಯಾವುದೇ ಹೇಳಿಕೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News