ಸರ್ಕಾರಿ ಬಂಗಲೆ ತೆರವುಗೊಳಿಸಲು ಪ್ರಿಯಾಂಕಾ ಗಾಂಧಿಗೆ ತಿಂಗಳ ಗಡುವು

Update: 2020-07-02 04:05 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಹಂಚಿಕೆ ಮಾಡಿದ್ದ ಅಧಿಕೃತ ಸರ್ಕಾರಿ ಬಂಗಲೆಯನ್ನು ಈ ತಿಂಗಳ ಕೊನೆಯ ಒಳಗಾಗಿ ತೆರವುಗೊಳಿಸುವಂತೆ ಗೃಹ ನಿರ್ಮಾಣ ಸಚಿವಾಲಯ ಸೂಚನೆ ನೀಡಿದೆ.

ಇವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಈ ರದ್ದುಪಡಿಸಿದ ಹಿನ್ನೆಲೆಯಲ್ಲಿ, ಲೋಧಿ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುವ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ರಿಯಾಂಕಾ ಗಾಂಧಿಯವರಿಗೆ ಝೆಡ್ ಪ್ಲಸ್ ಭದ್ರತಾ ಸೌಲಭ್ಯವಿದ್ದು, ಇದರ ಅನ್ವಯ ಸರ್ಕಾರಿ ಬಂಗಲೆ ಹಂಚಿಕೆ ಮಾಡಲು ಅವಕಾಶ ಇರುವುದಿಲ್ಲ.

ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಉತ್ತರ ಪ್ರದೇಶದ ಉಸ್ತುವಾರಿ ಹೊಂದಿರುವ ಪ್ರಿಯಾಂಕಾ ಅವರಿಗೆ 23 ವರ್ಷದ ಹಿಂದೆ ಈ ಬಂಗಲೆ ಹಂಚಿಕೆ ಮಾಡಲಾಗಿತ್ತು. ಎಸ್‌ಪಿಜಿ ಕಾಯ್ದೆಗೆ ತಿದ್ದುಪಡಿಗೆ ಮುನ್ನ ಪ್ರಧಾನಿ ಹಾಗೂ ಮಾಜಿ ಪ್ರಧಾನಿ ಕುಟುಂಬಕ್ಕೆ ಮಾತ್ರ ಎಸ್‌ಪಿಜಿ ಭದ್ರತೆ ಒದಗಿಸಲಾಗುತ್ತಿತ್ತು. ಸುರಕ್ಷತೆ ದೃಷ್ಟಿಯಿಂದ ಅವರಿಗೆ ಸರ್ಕಾರಿ ವಸತಿಯ ಅವಕಾಶ ಇರುತ್ತದೆ.

2019ರ ಡಿಸೆಂಬರ್ 3ರಂದು ಸಂಸತ್ತಿನಲ್ಲಿ ಎಸ್‌ಪಿಜಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಲಾಗಿದ್ದು, ಇದರ ಅನುಸಾರ ಜುಲೈ 1ರಂದು ನೋಟಿಸ್ ನೀಡಲಾಗಿದೆ. ಇದು ಬಿಜೆಪಿಯ ರಾಜಕೀಯ ದ್ವೇಷ ಸಾಧನೆ ಎಂದು ಕಾಂಗ್ರೆಸ್ ಪಕ್ಷ ಆಪಾದಿಸಿದೆ. ಈ ಮುನ್ನ ಗಾಂಧಿ ಕುಟುಂಬ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ರದ್ದುಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News