​ಉಡುಪಿ: ಎಸೆಸೆಲ್ಸಿ ಪ್ರಥಮ ಭಾಷಾ ಪರೀಕ್ಷೆಗೆ 94 ಮಂದಿ ಗೈರು

Update: 2020-07-02 12:49 GMT

ಉಡುಪಿ, ಜು.2: ಉಡುಪಿ ಜಿಲ್ಲೆಯಾದ್ಯಂತ ಗುರುವಾರ ಒಟ್ಟು 51 ಕೇಂದ್ರಗಳಲ್ಲಿ ನಡೆದ ಈ ಬಾರಿಯ ಎಸೆಸೆಲ್ಸಿ ಪ್ರಥಮ ಭಾಷಾ ಪರೀಕ್ಷೆಯನ್ನು ಒಟ್ಟು 12771 ಮಂದಿ ವಿದ್ಯಾರ್ಥಿಗಳು ಬರೆದಿದ್ದು, ಒಟ್ಟಾರೆಯಾಗಿ 94 ಮಂದಿ ಗೈರುಹಾಜರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 13548 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾ ಯಿಸಿಕೊಂಡಿದ್ದು, ಇವರಲ್ಲಿ ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 588 ಮತ್ತು ಹಾಜರಾತಿ ಇಲ್ಲದೆ ಹಾಲ್ ಟಿಕೆಟ್‌ನಿಂದ ವಂಚಿತರಾದ 95 ಮಂದಿ ಸೇರಿ ದ್ದಾರೆ. ಇವರನ್ನು ಹೊರತು ಪಡಿಸಿ 94 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

ಇದೇ ಮೊದಲ ಬಾರಿ ಒಟ್ಟು 12,191 ಮಂದಿ ಫ್ರಷರ್ ಆಗಿ ಬರೆದರೆ, ಖಾಸಗಿಯಾಗಿ ಹೆಸರು ನೊಂದಾಯಿಸಿಕೊಂಡ ಒಟ್ಟು 413 ಮಂದಿಯ ಪೈಕಿ 345 ಮಂದಿ ಪರೀಕ್ಷೆ ಬರೆದು, 68 ಮಂದಿ ಗೈರು ಹಾಜರಾಗಿದ್ದಾರೆ. ಹೊರ ಜಿಲ್ಲೆಗಳಿಂದ ಹೆಸರು ನೋಂದಾಯಿಸಿಕೊಂಡ ಎಲ್ಲ 82 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಕರೆತರಲು ಬಸ್ಸು ಹಾಗೂ ಇತರ ಶಾಲಾ ವಾಹನಗಳು ಸೇರಿದಂತೆ ಒಟ್ಟು 82 ವಾಹನಗಳನ್ನು ಬಳಸಿ ಕೊಳ್ಳಲಾಯಿತು ಎಂದೂ ಅವರು ನುಡಿದರು. 

ಕಂಟೈನ್‌ಮೆಂಟ್ ವಲಯದಿಂದ 10 ಮಂದಿ: ಗುರುವಾರ ಕಂಟೈನ್‌ಮೆಂಟ್ ವಲಯಗಳಿಂದ ಒಟ್ಟು 10 ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇವರೆಲ್ಲರು ಪ್ರತ್ಯೇಕ ಕೋಣೆಗಳಲ್ಲಿ ಕುಳಿತು ಪರೀಕ್ಷೆ ಬರೆದರು. ಬೈಂದೂರು, ಕಾರ್ಕಳಗಳಿಂದ ತಲಾ ಮೂವರು, ಬ್ರಹ್ಮಾವರದಿಂದ ಇಬ್ಬರು, ಕುಂದಾಪುರ ಮತ್ತು ಉಡುಪಿ ದಕ್ಷಿಣದಿಂದ ತಲಾ ಒಬ್ಬರು ಕಂಟೈನ್‌ಮೆಂಟ್ ಪ್ರದೇಶದಿಂದ ಬಂದು ಪರೀಕ್ಷೆ ಬರೆದರು.

ಇಂದಿನ ಪರೀಕ್ಷೆಗೆ ಹಾಜರಾದ 14 ಮಂದಿ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡು ಬಂದಿದೆ. ಹೀಗೆ ಬೈಂದೂರು- 5, ಕುಂದಾಪುರ-4, ಬ್ರಹ್ಮಾವರ -3, ಉಡುಪಿ ವಲಯ ದಕ್ಷಿಣದಿಂದ ಇಬ್ಬರು ಸೇರಿದಂತೆ ಒಟ್ಟು 14 ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಿದ್ದಾರೆ.

ವಿದ್ಯಾರ್ಥಿಗಳೆಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತ ಅಂತರವನ್ನು ಕಾಯ್ದು ಕೊಂಡು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಇಂದಿನ ಪರೀಕ್ಷೆಗೆ ಎಲ್ಲ ರೀತಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಎಲ್ಲೂ ಪರೀಕ್ಷೆಯಲ್ಲಿ ಯಾವುದೇ ಗೊಂದಲಗಳು ಹಾಗೂ ಅವ್ಯವಹಾರ ಗಳು ನಡೆದಿಲ್ಲ ಎಂದು ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News