ಕೋವಿಡ್ ವರದಿಗಾಗಿ ಕಾದು ವೃದ್ಧನ ಮೃತದೇಹವನ್ನು ಐಸ್ ಕ್ರೀಂ ಫ್ರೀಝರ್ ನಲ್ಲಿಟ್ಟ ಕುಟುಂಬ !

Update: 2020-07-02 13:57 GMT

ಕೊಲ್ಕತ್ತಾ : ಸೋಮವಾರ ಮನೆಯಲ್ಲೇ ಸಾವನ್ನಪ್ಪಿದ 70 ವರ್ಷದ ಹಿರಿಯ ನಾಗರಿಕರೊಬ್ಬರ ಕೋವಿಡ್ ವರದಿ ಇನ್ನಷ್ಟೇ ಬರಬೇಕಿದ್ದುದರಿಂದ ಅಲ್ಲಿಯ ತನಕ ಮೃತದೇಹದ ಅಂತ್ಯಸಂಸ್ಕಾರ ಸಾಧ್ಯವಿಲ್ಲದೆ ಕುಟುಂಬ ಅನಿವಾರ್ಯವಾಗಿ ಕಳೇಬರವನ್ನು ಐಸ್ ಕ್ರೀಂ ಫ್ರೀಝರ್ ನಲ್ಲಿಟ್ಟ ಘಟನೆ ಕೊಲ್ಕತ್ತಾದಿಂದ ವರದಿಯಾಗಿದೆ.

ಸ್ಥಳೀಯಾಡಳಿತದ ಸಿಬ್ಬಂದಿ ಕೊನೆಗೂ ವೃದ್ಧ ಮೃತಪಟ್ಟು 48 ಗಂಟೆಗಳ ನಂತರ  ಅಂತ್ಯಸಂಸ್ಕಾರಕ್ಕೆ ಕಳೇಬರವನ್ನು ಒಯ್ದಿದ್ದಾರೆ.

ಹಿರಿಯ ನಾಗರಿಕ ಮೃತಪಟ್ಟಾಗ ಕೋವಿಡ್ ವರದಿಯಿಲ್ಲದೆ ಮರಣ ಪ್ರಮಾಣಪತ್ರ ನೀಡಲಾಗದು ಎಂದು ವೈದ್ಯರು ಹೇಳಿದ್ದರು. ಈ ಪ್ರಮಾಣಪತ್ರವಿಲ್ಲದೆ ರುದ್ರಭೂಮಿಯಲ್ಲೂ ಅಂತ್ಯಕ್ರಿಯೆಗೆ ಅನುಮತಿ ನೀಡುವುದಿಲ್ಲ.

ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ವೈದ್ಯರಲ್ಲಿಗೆ ವೃದ್ಧ ಹೋಗಿದ್ದು ಆಗ ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ ಅವರು ಮನೆಗೆ ಮರಳಿದ ನಂತರ ಆರೋಗ್ಯ ಹದಗೆಟ್ಟು ಅಪರಾಹ್ನ ಮೂರು ಗಂಟೆ ವೇಳೆಗೆ ಮೃತಪಟ್ಟಿದ್ದರು. ನಂತರ ವೈದ್ಯರೊಬ್ಬರು ಪಿಪಿಇ ಕಿಟ್ ಧರಿಸಿ ಅವರ ಮನೆಗೆ ಭೇಟಿ ನೀಡಿದ್ದರೂ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರು. ಕುಟುಂಬ ಸದಸ್ಯರು ಆರೋಗ್ಯ ಇಲಾಖೆ, ಸ್ಥಳೀಯಾಡಳಿತ, ಪೊಲೀಸರು ಹಾಗೂ ಜನಪ್ರತಿನಿಧಿಗಳಿಗೆ ಕರೆ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಮಂಗಳವಾರ ಬೆಳಗ್ಗೆ ದೇಹವನ್ನು ಇರಿಸಲು ಕುಟುಂಬ ಐಸ್ ಕ್ರೀಂ ಫ್ರೀಝರ್ ಮನೆಗೆ ತಂದಿತ್ತು. ಅದೇ ಸಂಜೆ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News