ದ.ಕ. ಜಿಲ್ಲೆ: 10 ಮಕ್ಕಳು, ವೃದ್ಧರು ಸಹಿತ 90 ಮಂದಿಗೆ ಕೊರೋನ

Update: 2020-07-02 14:30 GMT

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಗಣನೀಯವಾಗಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಗುರುವಾರ  ಬರೋಬ್ಬರಿ 90 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಇದು ಎರಡನೇ ಬಾರಿ ಅತಿಹೆಚ್ಚು ಪ್ರಕರಣಗಳು ಕಂಡು ಬರುತ್ತಿದ್ದು, ಜೂ.28ರಂದು 97 ಮಂದಿಗೆ ಸೋಂಕು ತಗುಲಿತ್ತು. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 923ಕ್ಕೆ ಏರಿಕೆಯಾಗಿದೆ. ಇದರಲ್ಲಿ 10 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಮೂಲ ಪತ್ತೆಯಾಗದೇ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಕೊರೋನವು ಸಮುದಾಯಕ್ಕೆ ಹಬ್ಬುತ್ತಿರುವ ಲಕ್ಷಣವಾಗಿದೆ. ಕೊರೋನವು ಸರಣಿ ರೂಪದಲ್ಲಿ ವ್ಯಾಪಕ ಗೊಳ್ಳುತ್ತಿರುವುದು ಸಾರ್ವಜನಿಕ ಕಳವಳಕ್ಕೂ ಕಾರಣವಾಗಿದೆ.

ಸೋಂಕಿತರ ಪೈಕಿ 15 ಮಂದಿ ಕುವೈತ್, ಸೌದಿ ಅರೇಬಿಯ, ದುಬೈಯಿಂದ ಬಂದವರು. ಐಎಲ್‌ಐ 16, ಎಸ್‌ಎಆರ್‌ಐ ಎಂಟು, ಮೂಲ ಪತ್ತೆಯಾಗದ 17, ಪ್ರಾಥಮಿಕ ಸಂಪರ್ಕ ಹೊಂದಿದ 31 ಮಂದಿಗೆ ಸೋಂಕು ತಗುಲಿದೆ. 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮಕ್ಕಳಲ್ಲಿ ಸೋಂಕು ಹೆಚ್ಚಳ: ಕೊರೋನ ಸೋಂಕು ಮಕ್ಕಳು, ವೃದ್ಧರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ದುಬೈನಿಂದ ಬಂದಿದ್ದ ಮೂರು ವರ್ಷದ ಬಾಲಕ, ಪಿ-11386ರ ಸಂಪರ್ಕಿತ ಎರಡು, ಮೂರು, ಆರು, ಎಂಟು, 13 ವರ್ಷದ ಬಾಲಕರು ಹಾಗೂ 12 ವರ್ಷದ ಬಾಲಕಿ, ಪಿ-12382ರ ಸಂಪರ್ಕಿತ ಏಳು ವರ್ಷದ ಬಾಲಕಿ, ಐಎಲ್‌ಐ ಪ್ರಕರಣದಲ್ಲಿ 15 ವರ್ಷದ ಬಾಲಕಿ, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ 15 ವರ್ಷದ ಬಾಲಕಿಗೆ ಕೊರೋನ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಒಂದೇ ಕುಟುಂಬದ 10 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಈಗಾಗಲೇ ಕೊರೋನ ಸೋಂಕಿಗೆ ಒಳಗಾದ ಪಿ-11386ರ ಸಂಪರ್ಕಿತ ಕುಟುಂಬದಲ್ಲಿ 10 ಮಂದಿಯಲ್ಲಿ ಪಾಸಿಟವ್ ಕಂಡುಬಂದಿದೆ. ರೋಗಿಯ ಸಂಪರ್ಕಿತರಾದ ಎರಡು, ಮೂರು, ಆರು, ಎಂಟು, 13 ವರ್ಷದ ಬಾಲಕರು ಹಾಗೂ 12 ವರ್ಷದ ಬಾಲಕಿ, 50, 36, 30 ವರ್ಷದ ಮಹಿಳೆಯರು, 44 ವರ್ಷದ ಪುರುಷರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರೆಲ್ಲರನ್ನು ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

11 ವೃದ್ಧರಿಗೂ ಅಂಟಿದ ಸೋಂಕು: ಯುವಕರು, ಮಕ್ಕಳಿಗಷ್ಟೇ ಅಲ್ಲ; ವೃದ್ಧರನ್ನೂ ಕೊರೋನ ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ಆರೋಗ್ಯ ಇಲಾಖೆಯ ಪ್ರಕಟಿಸಿದ ಬುಲೆಟಿನ್‌ನಲ್ಲಿ ಗುರುವಾರ 11 ವೃದ್ಧರಲ್ಲಿ ಸೋಂಕು ದೃಢಪಟ್ಟಿದೆ. ಐಎಲ್‌ಐ ಪ್ರಕರಣದ 75, 67, 62, 65 ವರ್ಷದ ಪುರುಷ, 68 ವರ್ಷದ ಹೆಂಗಸು ಹಾಗೂ ಎಸ್‌ಎಆರ್‌ಐ ಪ್ರಕರಣದಲ್ಲಿ 82 ವರ್ಷದ ಮಹಿಳೆ, 75, 75, 74, 65 ವರ್ಷದ ಪುರುಷರು, ಪಿ-10588ರ ಪ್ರಾಥಮಿಕ ಸಂಪರ್ಕದಲ್ಲಿದ್ದ 62 ವರ್ಷದ ಪುರುಷನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

33 ಮಂದಿ ಗುಣಮುಖ: ಸಮಾಧಾನಕರ ಬೆಳವಣಿಗೆಯಲ್ಲಿ ಗುರುವಾರ ಒಂದು ವರ್ಷದ ಮಗು, ಇಬ್ಬರು ವೃದ್ಧರು ಸಹಿತ 33 ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 477 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಐಸಿಯುನಲ್ಲಿ ನಾಲ್ವರು: 57 ವರ್ಷದ ಹೆಂಗಸನ್ನು ಲಿವರ್ ಕಾಯಿಲೆ, ಡಯಾಬಿಟಿಸ್, ಹೃದಯರೋಗ ಹಾಗೂ ನ್ಯುಮೋನಿಯದಿಂದ ಬಳಲುತ್ತಿ ದ್ದಾರೆ. ಇನ್ನು 78 ವರ್ಷದ ವೃದ್ಧನನ್ನು ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪಾರ್ಕಿನ್‌ಸನ್ ಕಾಯಿಲೆ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದಾರೆ. 52 ವರ್ಷದ ಮಹಿಳೆಯು ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇನ್ನು 38 ವರ್ಷದ ಪುರುಷನು ಅಸ್ತಮಾದಿಂದ ಬಳಲುತ್ತಿದ್ದು, ಇವರನ್ನೂ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಒಟ್ಟು 130 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 90 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 293 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 427ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News