ದ.ಕ. ಜಿಲ್ಲೆಯ ಕಾರ್ಮಿಕರಿಗೆ ಪರಿಹಾರ ಘೋಷಣೆಯಾಗಿಲ್ಲ: ಬಿ.ಕೆ. ಇಮ್ತಿಯಾಝ್

Update: 2020-07-02 14:39 GMT

ಮಂಗಳೂರು, ಜು. 2: ದ.ಕ. ಜಿಲ್ಲೆಯ ಸಾವಿರಾರು ಕಾರ್ಮಿಕರಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಪರಿಹಾರ ಘೋಷಣೆಯಾಗಿಲ್ಲ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ತಿಳಿಸಿದ್ದಾರೆ.

ಕೊರೋನ ನಿಗ್ರಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ವಿಫಲವಾಗಿರುವುದನ್ನು ವಿರೋಧಿಸಿ ಸಿಪಿಎಂನಿಂದ ಹಮ್ಮಿಕೊಂಡ ವಾರಾಚರಣೆ ಕಾರ್ಯಕ್ರಮದ ಭಾಗವಾಗಿ ನಗರದ ಬಂದರು ಬೈತಧಕ್ಕೆಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಆರ್ಥಿಕತೆಯ ಜೀವನಾಡಿ ಬೀಡಿ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಈಗಲೂ ಅದನ್ನೇ ನಂಬಿಕೊಂಡು ಜೀವನ ಸಾಗಿಸುವ ಮೂರು ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದಾರೆ.ಹೋಟೆಲ್ ಉದ್ಯಮದಲ್ಲೂ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಸಾವಿರಾರು ಹೋಟೆಲ್ ಕಾರ್ಮಿಕರಿದ್ದಾರೆ. ಶೈಕ್ಷಣಿಕ ಕೇಂದ್ರವಾದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಯಥೇಚ್ಛವಾಗಿದ್ದು, ಅಲ್ಲಿ ದುಡಿಯುವ ಸಾವಿರಾರು ಶಿಕ್ಷಕರಿದ್ದಾರೆ ಎಂದರು.

ಸಾಂಸ್ಕೃತಿಕ ಕೇಂದ್ರವಾದ ಕರಾವಳಿ ಜಿಲ್ಲೆಯಲ್ಲಿ ಸಾವಿರಾರು ಕಲಾವಿದರು ತಮ್ಮ ಕಲಾಪ್ರತಿಭೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಹೀಗೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಸರಕಾರದಿಂದ ಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಕೇಂದ್ರ ಸರಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಯಾರಿಗಾಗಿ, ಯಾರ ಕಲ್ಯಾಣಕ್ಕಾಗಿ ಎಂದು ಅವರು ಕೇಂದ್ರ ಸರಕಾರದ ಜನವಿರೋಧಿ ಕ್ರಮಗಳನ್ನು ತೀವ್ರವಾಗಿ ಖಂಡಿಸಿದರು.

ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್ ಮಾತನಾಡಿ, ಕಳೆದ ಮೂರು ತಿಂಗಳ ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರ ಬದುಕು ತತ್ತರಗೊಂಡಿದೆ. ಈ ಮೊದಲೇ ದೇಶದ ಜಿಡಿಪಿ ಕುಸಿದಿದ್ದು, ಇದರಿಂದಾಗಿ ಮತ್ತಷ್ಟು ಪಾತಾಳಕ್ಕೆ ಕುಸಿತ ಕಂಡಿದೆ ಎಂದರು.

ಕಾರ್ಮಿಕ ವರ್ಗ ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಕಂಗಾಲಾಗಿದೆ. ಲಾಕ್‌ಡೌನ್ ಸಂದರ್ಭದ ವೇತನ ಪಾವತಿಸಬೇಕು. ಪ್ರತೀ ಕುಟುಂಬಕ್ಕೆ 7,500 ರೂ.ನ್ನು ನೇರ ನಗದು ವರ್ಗಾವಣೆ ಮಾಡಬೇಕು. ಆಹಾರ ಧಾನ್ಯಗಳನ್ನು ನೀಡಬೇಕು. ಹೀಗೆ ಜನರಲ್ಲಿ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆತ್ಮಸ್ಥೈರ್ಯವನ್ನು ತುಂಬಿಸಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮಂಗಳೂರು ನಗರಾಧ್ಯಕ್ಷ ನವೀನ್ ಕೊಂಚಾಡಿ, ಬಂದರು ಶ್ರಮಿಕ ಸಂಘದ ಮುಖಂಡರಾದ ಹಸನ್ ಮೋನು, ಹರೀಶ್ ಕೆರೆಬೈಲ್, ಚಂದ್ರಹಾಸ, ಫಾರೂಕ್, ಎಲ್ಲಪ್ಪ, ಮಜೀದ್, ಮೊಹಿಯುದ್ದೀನ್, ಹಂಝ, ಡಿವೈಎಫ್‌ಐ ನಾಯಕರಾದ ಪಿ.ಜಿ. ರಫೀಕ್, ಯಾಹ್ಯಾ ಬೆಂಗರೆ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News