ವಿಮಾನ ದರದಲ್ಲಿ ವೈದ್ಯರು, ನರ್ಸ್‌ಗಳಿಗೆ 25% ರಿಯಾಯಿತಿ: ಇಂಡಿಗೋ ಘೋಷಣೆ

Update: 2020-07-02 15:45 GMT

ಹೊಸದಿಲ್ಲಿ, ಜು.2: ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಸೇನಾನಿಗಳಾಗಿರುವ ವೈದ್ಯರು ಹಾಗೂ ನರ್ಸ್‌ಗಳಿಗೆ 2020ರ ಅಂತ್ಯದವರೆಗೆ ವಿಮಾನ ದರದಲ್ಲಿ 25% ರಿಯಾಯಿತಿ ನೀಡಲಾಗುವುದು ಎಂದು ಇಂಡಿಗೋ ಹೇಳಿದೆ.

ಈ ಯೋಜನೆ 2020ರ ಜುಲೈ 1ರಿಂದ 2020ರ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಇಂಡಿಗೋದ ವೆಬ್‌ಸೈಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಿದರೆ ಈ ರಿಯಾಯಿತಿ ದೊರಕುತ್ತದೆ. ನರ್ಸ್‌ಗಳು ಮತ್ತು ವೈದ್ಯರು ಚೆಕ್-ಇನ್ ಸಂದರ್ಭ ಆಸ್ಪತ್ರೆಯ ಗುರುತು ಪತ್ರ ಒದಗಿಸಬೇಕು ಎಂದು ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಯೋಜನೆಗೆ ‘ಟಫ್ ಕುಕೀ’ (ಕಠಿಣ ಕೇಕ್) ಅಭಿಯಾನ ಎಂದು ಹೆಸರಿಡಲಾಗಿದೆ. ಈ ಉಪಕ್ರಮದಡಿ, ಟಫ್ ಕುಕಿ ಪ್ರಯಾಣವನ್ನು ಪ್ರತೀ ಹಂತದಲ್ಲೂ ವಿಶೇಷವನ್ನಾಗಿಸಲು ಇಂಡಿಗೋ ಕ್ರಮ ಕೈಗೊಂಡಿದೆ. ಚೆಕ್-ಇನ್‌ನಲ್ಲಿ ಕುಕಿ(ಕೇಕ್) ಡಬ್ಬವನ್ನು ಇರಿಸಲಾಗುತ್ತದೆ. ಬೋರ್ಡಿಂಗ್ ಗೇಟ್‌ನಲ್ಲಿ ಮುಂಚೂಣಿ ಸೇನಾನಿಗಳಿಗೆ ಸ್ವಾಗತ ಕೋರುವ ಘೋಷಣೆ, ಪಿಪಿಇ ಮೇಲೆ ವಿಶೇಷ ‘ಟಫ್ ಕುಕಿ’ ಸ್ಟಿಕರ್ ಹಾಗೂ ವಿಮಾನದೊಳಗೆ ಅವರಿಗೆ ವಿಶೇಷ ಸ್ವಾಗತ ಕೋರುವ ಘೋಷಣೆ ಈ ಅಭಿಯಾನದ ವಿಶೇಷವಾಗಿದೆ ಎಂದು ಸಂಸ್ಥೆ ಹೇಳಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ 2 ತಿಂಗಳ ಸ್ಥಗಿತದ ಬಳಿಕ ದೇಶೀಯ ವಿಮಾನ ಸಂಚಾರ ಪುನರಾರಂಭಗೊಂಡಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಸಾಮಾನ್ಯವಾಗಿ 180 ಆಸನ ವ್ಯವಸ್ಥೆ ಇರುವ ಒಂದು ವಿಮಾನದಲ್ಲಿ ಸರಾಸರಿ 91 ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News