ಉಡುಪಿ ಜಿಲ್ಲೆಯ 14 ಮಂದಿಗೆ ಕೊರೋನ ಪಾಸಿಟಿವ್

Update: 2020-07-02 15:51 GMT

ಉಡುಪಿ, ಜು. 2: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿಗೆ ಗುರುವಾರ ಜಿಲ್ಲೆಯ 14 ಮಂದಿ ಪಾಸಿಟಿವ್ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 14 ಮಂದಿಯಲ್ಲಿ ಮುಂಬೈ, ಮಹಾರಾಷ್ಟ್ರ ದಿಂದ ಬಂದ ನಾಲ್ವರು, ಕೇರಳದಿಂದ ಬಂದ ಒಬ್ಬರು, ಬೆಂಗಳೂರಿನಿಂದ ಬಂದ ನಾಲ್ವರು ಹಾಗೂ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದ ಸ್ಥಳೀಯ ಪ್ರಾಥಮಿಕ ಸಂಪರ್ಕಿತರು ಐವರು ಸೇರಿದ್ದಾರೆ ಎಂದವರು ವಿವರಿಸಿದರು.

ಸೋಂಕಿತರಲ್ಲಿ ಉಡುಪಿ ತಾಲೂಕಿನ ನಾಲ್ವರು ಹಾಗೂ ಕುಂದಾಪುರದ 10 ಮಂದಿ ಸೇರಿದ್ದಾರೆ. ಏಳು ಮಂದಿ ಪುರುಷರು, ನಾಲ್ವರು ಮಹಿಳೆಯರು ಹಾಗೂ ಮೂರು ವರ್ಷದ ಗಂಡು, ಒಂದು ಮತ್ತು ಏಳು ವರ್ಷ ಪ್ರಾಯದ ಇಬ್ಬರು ಹೆಣ್ಣು ಮಕ್ಕಳು ಸೇರಿ ಒಟ್ಟು ಮೂವರು ಮಕ್ಕಳಿದ್ದಾರೆ ಎಂದರು.

ಗುರುವಾರ 14 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಒಟ್ಟು ಸಂಖ್ಯೆ 1242ಕ್ಕೇರಿದೆ. ಉಡುಪಿ ಜಿಲ್ಲೆಯು ಬೆಂಗಳೂರು (6179) ಹಾಗೂ ಕಲಬುರಗಿ ಜಿಲ್ಲೆ (1488) ಜಿಲ್ಲೆಗಳ ಬಳಿಕ ಮೂರನೇ ಸ್ಥಾನದಲ್ಲಿಯೇ ಉಳಿದಿದೆ. ಇಂದು 65 ಪ್ರಕರಣಗಳೊಂದಿಗೆ ಬಳ್ಳಾರಿ (984) ನಾಲ್ಕನೇ ಸ್ಥಾನಕ್ಕೇರಿದರೆ, ಯಾದಗಿರಿ 956 ಕೇಸುಗಳೊಂದಿಗೆ ಐದನೇ ಸ್ಥಾನಕ್ಕಿಳಿದಿದೆ. ದಕ್ಷಿಣಕನ್ನಡ ಜಿಲ್ಲೆ 915 ಕೇಸುಗಳೊಂದಿಗೆ ಆರನೇ ಸ್ಥಾನದಲ್ಲಿವೆ.

ಸ್ಥಳೀಯರು ಐವರು

ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರು ಐವರು ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

21 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಪಾಸಿಟಿವ್ ಬಂದು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಗುಣಮುಖರಾದ 21 ಮಂದಿಯನ್ನು ಇಂದು ಬಿಡುಗಡೆ ಗೊಳಿಸಲಾಗಿದೆ. ಇವರಲ್ಲಿ ಕುಂದಾಪುರ ಆಸ್ಪತ್ರೆಯಿಂದ 15, ಕಾರ್ಕಳದಿಂದ 4 ಹಾಗೂ ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ಇಬ್ಬರು ಬಿಡುಗಡೆಯಾಗಿದ್ದಾರೆ. ಈ ಮೂಲಕ ಬಿಡುಗಡೆಗೊಂಡವರ ಒಟ್ಟು ಸಂಖ್ಯೆ ಜಿಲ್ಲೆಯಲ್ಲಿ 1090ಕ್ಕೇರಿದೆ. ಇನ್ನು 149 ಮಂದಿ ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ.

ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಹಿರಿಯ ನಾಗರಿಕರಲ್ಲಿ ಒಬ್ಬರು ಚೇತರಿಸಿ ಕೊಂಡಿದ್ದಾರೆ. ಉಚ್ಚಿಲದ ವೃದ್ಧರ ಸ್ಥಿತಿ ಇನ್ನೂ ಗಂಭೀರವಿದ್ದು ಅವರಿಗೆ ಈಗಲೂ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಡಿಎಚ್‌ಓ ವಿವರಿಸಿದರು.

ಮಗುವಿನ ವರದಿ ನಿರೀಕ್ಷೆಯಲ್ಲಿ: ಉಸಿರಾಟದ ಸಮಸ್ಯೆಯಿಂದ ಬಳಲುತಿದ್ದು, ಬುಧವಾರ ಅಪರಾಹ್ನ ಮೃತಪಟ್ಟ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಕಾಜರಬೈಲು ಗ್ರಾಮದ 10 ತಿಂಗಳ ಮಗುವಿನ ಗಂಟಲುದ್ರವ ಮಾದರಿಯ ಪರೀಕ್ಷಾ ವರದಿ ಇಂದು ಕೈಸೇರಿಲ್ಲ ಎಂದು ಡಾ. ಸೂಡ ತಿಳಿಸಿದರು.

ಮೂಲತ: ವಿಜಯಪುರದ ಮುದ್ದೇಬಿಹಾಳದ ದಂಪತಿಗಳು ಲಾಕ್‌ಡೌನ್ ವೇಳೆ ಊರಿಗೆ ತೆರಳಿದ್ದು, ನಾಲ್ಕೈದು ದಿನಗಳ ಹಿಂದೆ ಮಿಯಾರಿಗೆ ಮರಳಿ ಬಂದಿದ್ದರು. ಜೂ.28ರ ರಾತ್ರಿ ಮಗುವಿಗೆ ಜ್ವರ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬುಧವಾರ ಅಪರಾಹ್ನ ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟಿರುವು ದಾಗಿ ವೈದ್ಯರು ಘೋಷಿಸಿದರು. ಇದೀಗ ಮಗುವಿನ ಮಾದರಿ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಅವರು ಹೇಳಿದರು.

811 ಮಂದಿಯ ಮಾದರಿ ಪರೀಕ್ಷೆಗೆ: ಗುರುವಾರ 256 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿವೆ. ಅಲ್ಲದೇ ಇಂದು ಇನ್ನೂ 811 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಸೋಂಕಿನ ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾ ಗಿದೆ. ಇದರಲ್ಲಿ ಕೋವಿಡ್ ಶಂಕಿತರು 20 ಮಂದಿ, ಕೋವಿಡ್ ಸಂಪರ್ಕಿತರು 73, ಉಸಿರಾಟ ತೊಂದರೆಯ ಇಬ್ಬರು, ಶೀತಜ್ವರದಿಂದ ಬಳಲುವ 44 ಹಾಗೂ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 672 ಮಂದಿಯ ಸ್ಯಾಂಪಲ್‌ಗಳು ಸೇರಿವೆ.

ಇಂದು ಪಡೆದ 811 ಮಂದಿ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 15,630ಕ್ಕೇರಿದೆ. ಇವುಗಳಲ್ಲಿ ಈವರೆಗೆ 13,450 ನೆಗೆಟಿವ್, 1242 ಪಾಸಿಟಿವ್ ಬಂದಿದ್ದು,ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 938 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಗುರುವಾರ 16 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಎಂಟು ಮಂದಿ ಉಸಿರಾಟ ತೊಂದರೆಯವರು ಹಾಗೂ ಎಂಟು ಮಂದಿ ಶೀತಜ್ವದಿಂದ ಬಳಲುವವರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 10 ಮಂದಿ ಬಿಡುಗಡೆಗೊಂಡಿದ್ದು, 88 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯು ತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 16 ಮಂದಿ ಸೇರಿದಂತೆ ಒಟ್ಟು 5891 ಮಂದಿಯನ್ನು ಕೊರೋನ ತಪಾಸಣೆ ಗಾಗಿ ನೊಂದಾಯಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1021 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News