ನಮ್ಮಲ್ಲಿ ಹೆಚ್ಚಿನವರಿಗೆ ಕೋವಿಡ್-19 ಲಸಿಕೆಯ ಅಗತ್ಯವಿಲ್ಲ: ಆಕ್ಸ್‌ಫರ್ಡ್ ವಿವಿಯ ಪ್ರೊ. ಗುಪ್ತಾ

Update: 2020-07-02 17:32 GMT

ಹೊಸದಿಲ್ಲಿ,ಜು.2: ಹೆಚ್ಚಿನ ಜನರಿಗೆ ಕೋವಿಡ್-19 ಲಸಿಕೆಯು ಅಗತ್ಯವಾಗುವುದಿಲ್ಲ ಎಂದು ಹೇಳಿರುವ ಸಾಂಕ್ರಾಮಿಕ ರೋಗಗಳ ತಜ್ಞೆ ಹಾಗೂ ಆಕ್ಸ್‌ಫರ್ಡ್ ವಿವಿಯ ಪ್ರೊಫೆಸರ್ ಸುನೇತ್ರಾ ಗುಪ್ತಾ ಅವರು, ಕೋರೋನ ವೈರಸ್ ಹರಡುವಿಕೆಯನ್ನು ತಡೆಯಲು ಲಾಕ್‌ಡೌನ್‌ಗಳು ದೀರ್ಘಾವಧಿಯ ಪರಿಹಾರಗಳಲ್ಲ ಎಂದು ಪ್ರತಿಪಾದಿಸಿದ್ದಾರೆ. ಲಾಕ್‌ಡೌನ್‌ಗಳ ವಿರುದ್ಧ ತನ್ನ ವಾದಕ್ಕಾಗಿ ಅವರು ಟ್ವಿಟರ್‌ನಲ್ಲಿ ‘ಪ್ರೊಫೆಸರ್ ರೀ ಓಪನ್’ ಅನ್ನು ಟ್ಯಾಗ್ ಮಾಡಿದ್ದಾರೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗುಪ್ತಾ,‘ಹಿರಿಯ ವಯಸ್ಸಿನವರಲ್ಲದ ಅಥವಾ ದುರ್ಬಲ ಕಾಯದವರಲ್ಲದ ಮತ್ತು ಯಾವುದೇ ಅನಾರೋಗ್ಯಗಳಿಲ್ಲದ ಸಾಮಾನ್ಯ, ಆರೋಗ್ಯವಂತ ಜನರ ಪಾಲಿಗೆ ಕೊರೋನ ವೈರಸ್ ಫ್ಲೂಗಿಂತ ಹೆಚ್ಚು ಚಿಂತಿಸಬೇಕಾದ ವಿಷಯವಲ್ಲ ಎನ್ನುವುದನ್ನು ಗಮನಿಸಿದ್ದೇವೆ. ಲಸಿಕೆಯು ಅಭಿವೃದ್ಧಿಗೊಂಡಾಗ ಅದು ಕೊರೋನ ವೈರಸ್‌ಗೆ ಸುಲಭವಾಗಿ ತುತ್ತಾಗಬಲ್ಲವರ ಚಿಕಿತ್ಸೆಗೆ ಬಳಕೆಯಾಗಲಿದೆ. ನಮ್ಮಲ್ಲಿ ಹೆಚ್ಚಿನವರು ಕೊರೋನ ವೈರಸ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ’ಎಂದು ಹೇಳಿದರು.

ಕೊರೋನ ವೈರಸ್ ಸಾಂಕ್ರಾಮಿಕವು ನೈಸರ್ಗಿಕವಾಗಿ ಕೊನೆಗೊಳ್ಳಲಿದೆ ಮತ್ತು ಇನ್‌ಫ್ಲುಯೆಂಝಾ ಅಥವಾ ಶೀತಜ್ವರದಂತೆ ನಮ್ಮ ಬದುಕಿನ ಒಂದು ಭಾಗವಾಗಿ ಉಳಿಯಲಿದೆ ಎಂದು ಭಾವಿಸಿದ್ದೇನೆ ಎಂದ ಅವರು,ಕೊರೋನ ವೈರಸ್ ಸಾವುಗಳ ಸಂಖ್ಯೆ ಇನ್‌ಫ್ಲುಯೆಂಜಾ ಸಾವುಗಳಿಗಿಂತ ಕಡಿಮೆಯಾಗಿರಲಿದೆ ಎಂದು ಆಶಯ ವ್ಯಕ್ತಪಡಿಸಿದರು. ‘ಕೊರೋನ ವೈರಸ್‌ಗೆ ಲಸಿಕೆಯನ್ನು ಸಿದ್ಧಪಡಿಸುವುದು ಹೆಚ್ಚು ಕಷ್ಟದ ಕೆಲಸವಲ್ಲ ಎಂದು ನಾನು ಭಾವಿಸಿದ್ದೇನೆ ಮತ್ತು ಈ ಬೇಸಿಗೆಯ ಅಂತ್ಯದೊಳಗೆ ಲಸಿಕೆ ಕೆಲಸ ಮಾಡುತ್ತದೆ ಎಂಬ ಪುರಾವೆ ನಮಗೆ ದೊರೆಯಬೇಕು’ ಎಂದರು.

ಲಾಕ್‌ಡೌನ್ ವಿವೇಚನಾಯುತ ಕ್ರಮ,ಆದರೆ ಅದು ವೈರಸ್‌ನ್ನು ತುಂಬ ಸಮಯ ದೂರವಿಡಲು ಶಕ್ತವಲ್ಲ ಎಂದ ಗುಪ್ತಾ,ಕೊರೋನ ವೈರಸ್ ಪಿಡುಗಿನ ಎರಡನೇ ಅಲೆ ಎಂದು ಬಣ್ಣಿಸಲಾಗುತ್ತಿರುವುದು ವಾಸ್ತವದಲ್ಲಿ ವಿವಿಧ ಭೌಗೋಳಿಕ ಪ್ರದೇಶಗಳನ್ನು ತಲುಪುತ್ತಿರುವ ಮೊದಲ ಅಲೆಯಾಗಿದೆ. ಲಾಕ್‌ಡೌನ್ ಅನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದ ದೇಶಗಳು ಈಗ ಮತ್ತೆ ವೈರಸ್ ಉಲ್ಬಣಗೊಳ್ಳುತ್ತಿರುವುದನ್ನು ಎದುರಿಸುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News