‘ಯೂನಿಸ್ ಖಾನ್ ಒಮ್ಮೆ ನನ್ನ ಗಂಟಲಿಗೆ ಚಾಕು ಹಿಡಿದಿದ್ದರು’

Update: 2020-07-03 05:30 GMT

ಕರಾಚಿ, ಜು.2: ‘‘ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್ ಅವರಿಗೆ ಕೆಲವು ಸಲಹೆಗಳನ್ನು ನೀಡಲು ಪ್ರಯತ್ನಿಸಿದಾಗ ಒಮ್ಮೆ ಅವರು ನನ್ನ ಗಂಟಲಿಗೆ ಚಾಕು ಹಿಡಿದಿದ್ದರು ’’ ಎಂದು ಪಾಕಿಸ್ತಾನದ ಮಾಜಿ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಆರೋಪಿಸಿದ್ದಾರೆ.

  ತಮ್ಮ ವೃತ್ತಿಜೀವನದಲ್ಲಿ ಕೋಚ್ ಹುದ್ದೆಯನ್ನು ನಿಭಾಯಿಸಿದ ಕ್ಷಣಗಳ ಬಗ್ಗೆ ಕೇಳಿದಾಗ, 2014 ರಿಂದ 2019 ರವರೆಗೆ ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಆಗಿದ್ದ 49ರ ಹರೆಯದ ಝಿಂಬಾಬ್ವೆಯ ಫ್ಲವರ್ ಅವರು ಯೂನಿಸ್ ಅವರೊಂದಿಗಿನ ಘಟನೆಯನ್ನು ನೆನಪಿಸಿಕೊಂಡರು.

ಇದೀಗ ಶ್ರೀಲಂಕಾದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಫ್ಲವರ್, ಸಹೋದರ ಆ್ಯಂಡಿ ಮತ್ತು ಆತಿಥೇಯ ನೀಲ್ ಮಾಂಥೋರ್ಪ್ ಅವರೊಂದಿಗೆ ‘ಫಾಲೋಯಿಂಗ್ ಆನ್ ಕ್ರಿಕೆಟ್ ಪೊಡ್‌ಕಾಸ್ಟ್’ ಕುರಿತು ಸಂವಾದದ ಸಂದರ್ಭದಲ್ಲಿ ಹೇಳಿದರು.

‘‘ಬ್ರಿಸ್ಬೇನ್‌ನಲ್ಲಿ ನಡೆದ ಒಂದು ಘಟನೆ ನನಗೆ ನೆನಪಿದೆ, ಟೆಸ್ಟ್ ನಡೆಯುತ್ತಿದ್ದಾಗ ಬೆಳಗಿನ ಉಪಾಹಾರದ ವೇಳೆ ನಾನು ಅವರಿಗೆ ಸ್ವಲ್ಪ ಬ್ಯಾಟಿಂಗ್ ಸಲಹೆಯನ್ನು ನೀಡಲು ಪ್ರಯತ್ನಿಸಿದೆ ಆದರೆ ಅವರು ನನ್ನ ಸಲಹೆಯನ್ನು ತೆಗೆದುಕೊಳ್ಳಲಿಲ್ಲ ಮತ್ತು ನನ್ನ ಗಂಟಲಿಗೆ ಚಾಕುವನ್ನು ಹಿಡಿದರು. ಆಗ ನನ್ನ ಬಳಿ ಇದ್ದ ಮಿಕ್ಕಿ ಆರ್ಥರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು’’ ಎಂದರು. 2016 ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಪಾಕಿಸ್ತಾನ-ಆಸ್ಟ್ರೇಲಿಯ ತಂಡಗಳ ಮೊದಲ ಟೆಸ್ಟ್ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಲ್ಲಿ ಯೂನಿಸ್ ಮೊದಲ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದರು. ಆದರೆ ಎರಡನೇ ಇನಿಂಗ್ಸ್ ನಲ್ಲಿ 65 ರನ್ ಗಳಿಸಿದರು. ಅವರು 2017ರ ಜನವರಿಯಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಟೌಟ್ 175 ರನ್ ಗಳಿಸುವುದರೊಂದಿಗೆ ಪ್ರವಾಸವನ್ನು ಕೊನೆಗೊಳಿಸಿದ್ದರು.

 ಪಾಕಿಸ್ತಾನ ಮೂರು ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕಳೆದುಕೊಂಡಿತ್ತು. ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸಕ್ಕಾಗಿ ಇತ್ತೀಚೆಗೆ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡ ಯೂನಿಸ್ ಪಾಕಿಸ್ತಾನದ ಪರ 118 ಟೆಸ್ಟ್ ಪಂದ್ಯಗಳಲ್ಲಿ 52.05 ಸರಾಸರಿಯಂತೆ 10,099 ರನ್ ಗಳಿಸಿದ್ದಾರೆ.

 67 ಟೆಸ್ಟ್‌ಗಳಲ್ಲಿ 3,457 ರನ್ ಮತ್ತು ಝಿಂಬಾಬ್ವೆ ಪರ 221 ಏಕದಿನ ಪಂದ್ಯಗಳಲ್ಲಿ 6,571 ರನ್ ಗಳಿಸಿರುವ ಫ್ಲವರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News