ಪ್ರಧಾನಮಂತ್ರಿ ನರೇಂದ್ರ ಮೋದಿ ಲಡಾಖ್‌ಗೆ ಭೇಟಿ,ಪರಿಸ್ಥಿತಿ ಪರಿಶೀಲನೆ

Update: 2020-07-03 16:54 GMT

ಹೊಸದಿಲ್ಲಿ,ಜು.3: ಭಾರತ ಹಾಗೂ ಚೀನಾ ಸೇನೆಯ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಲಡಾಕ್‌ಗೆ ಶುಕ್ರವಾರ ಹಠಾತ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಅತಿಕ್ರಮಣಕ್ಕೆ ಯತ್ನಿಸುತ್ತಿರುವ ಚೀನಾದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

 ವಿಸ್ತರಣಾವಾದದ ಯುಗ ಕೊನೆಗೊಂಡಿದೆ ಎಂದು ಹೇಳಿದ ಅವರು, ವಿಸ್ತರಣಾವಾದಿಗಳು ತಮ್ಮನ್ನು ತಾವೇ ತಿದ್ದಿಕೊಳ್ಳಬೇಕು ಇಲ್ಲದಿದ್ದಲ್ಲಿ ಅವರು ನಾಶಗೊಳ್ಳಲಿದ್ದಾರೆಂದು ಚೀನಾದ ಹೆಸರನ್ನು ಉಲ್ಲೇಖಿಸದೆಯೇ ಆ ದೇಶಕ್ಕೆ ಕಟುವಾದ ಸಂದೇಶವನ್ನು ನೀಡಿದ್ದಾರೆ.

ಲಡಾಕ್‌ನ ನಿಮುವಿನಲ್ಲಿರುವ ಸೇನಾ ನೆಲೆಯ ಬಳಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ‘‘ ವಿಸ್ತರಣಾವಾದದ ಯುಗ ಅಂತ್ಯಗೊಂಡಿದೆ. ಇದು ಪ್ರಗತಿಯ ಯುಗವಾಗಿದೆ. ಪ್ರಗತಿಯಲ್ಲೇ ಭವಿಷ್ಯ ಅಡಗಿದೆ. ವಿಸ್ತರಣಾವಾದದ ಯುಗದಲ್ಲಿ ಮಾನವಕುಲವು ಅಪಾರವಾದ ವೇದನೆಯನ್ನು ಅನುಭವಿಸಿತ್ತು’’ ಎಂದು ಪ್ರಧಾನಿ ಹೇಳಿದರು. ‘‘ವಿಸ್ತರಣಾವಾದಿಗಳು ಎಲ್ಲಾ ಕಾಲಗಳಲ್ಲಿಯೂ ಅಳಿದುಹೋಗಿದ್ದಾರೆಂಬುದಕ್ಕೆ ಇತಿಹಾಸವು ಪುರಾವೆಯಾಗಿದೆ’’ ಎಂದು ಅವರು ಹೇಳಿದರು.

 ತನ್ನ 26 ನಿಮಿಷಗಳ ಭಾಷಣದಲ್ಲಿ ಪ್ರಧಾನಿ, ಲಡಾಕ್‌ನಲ್ಲಿ ಚೀನಾ ಪಡೆಗಳ ವಿರುದ್ಧ ಸನ್ನದ್ಧ ಸ್ಥಿತಿಯಲ್ಲಿರುವ ಧೀರ ಯೋಧರಿಗೆ ನಮನ ಸಲ್ಲಿಸಿದರು. ‘‘ ಇಂತಹ ಸಂಕಷ್ಟಕರವಾದ ಸನ್ನಿವೇಶಗಳಲ್ಲಿ ನೀವು ತಾಯ್ನಾಡಿಗೆ ರಕ್ಷಾ ಕವಚವಾಗಿದ್ದೀರಿ’’ ಎಂದು ಪ್ರಧಾನಿ ಭೂಸೇನೆ, ವಾಯುಪಡೆ ಹಾಗೂ ಐಟಿಬಿಪಿ ಯೋಧರನ್ನುದ್ದೇಶಿಸಿ ಹೇಳಿದರು.

‘‘ನಿಮ್ಮ ಧೈರ್ಯವು ನೀವು ನಿಯೋಜಿಸ್ಪಟ್ಟಿರುವ ಸ್ಥಳದ ಎತ್ತರಕ್ಕಿಂತಲೂ ಉನ್ನತವಾದುದಾಗಿದೆ. ನಿಮ್ಮನ್ನು ಸುತ್ತುವರಿದಿರುವ ಪರ್ವತಗಳಿಗಿಂತಲೂ ನಿಮ್ಮ ಬಾಹುಗಳು ಬಲಿಷ್ಠವಾಗಿವೆ. ನಿಮ್ಮ ಆತ್ಮವಿಶ್ವಾಸ, ದೃಢನಿರ್ಧಾರ ಹಾಗೂ ನಂಬಿಕೆಯು ಇಲ್ಲಿನ ಶಿಖರಗಳಂತೆ ಅಚಲವಾದುದು’’ ಎಂದರು.

‘‘ಜಗತ್ತಿನಾದ್ಯಂತದ ಪ್ರತಿಯೊಬ್ಬ ಭಾರತೀಯನೂ, ಅದರಲ್ಲೂ ವಿಶೇಷವಾಗಿ ಭಾರತದ ನಿವಾಸಿಗಳು, ನೀವು ದೇಶವನ್ನು ಬಲಿಷ್ಠ ಹಾಗೂ ಸುರಕ್ಷಿತವಾಗಿ ಇರಿಸುವಿರಿ ಎಂಬ ನಂಬಿಕೆಯನ್ನು ಹೊಂದಿದ್ದಾನೆ. ಇದಕ್ಕೆ ಸವಾಲೆಸೆಯಲು ಜಗತ್ತಿನಲ್ಲಿರುವ ಯಾರಿಗೂ ಅಸಾಧ್ಯ’’ ಎಂದವರು ಹೇಳಿದ್ದಾರೆ.

 ಗಡಿಗಳ ರಕ್ಷಣೆಗಾಗಿ ಯೋಧರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಮೂಲಸೌಕರ್ಯ ಅಥವಾ ಸಲಕರಣೆಗಳು ಸುಗಮವಾಗಿ ತಲುಪಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.

  ‘‘ ಭಾರತೀಯ ಸಶಸ್ತ್ರ ಪಡೆಗಳು ಜಗತ್ತಿನ ಇತರೆಲ್ಲರಿಗಿಂತಲೂ ಶಕ್ತಿಶಾಲಿ ಹಾಗೂ ಶ್ರೇಷ್ಠವಾದುದು ಎಂಬುದನ್ನು ನೀವು ಕಾಲಕಾಲಕ್ಕೆ ಸಾಬೀತುಪಡಿಸಿದ್ದೀರಿ. ಲೇಹ್‌ ನಿಂದ ಲಡಾಕ್‌ಗೆ, ಕಾರ್ಗಿಲ್‌ನಿಂದ ಸಿಯಾಚಿನ್‌ವರೆಗೆ, ಎಲ್ಲಾ ಪ್ರಾಂತಗಳು ನಮ್ಮ ಸೇನೆಯ ಶೌರ್ಯಕ್ಕೆ ಸಾಕ್ಷಿಯಾಗಿವೆ. ನಿಮ್ಮ ಪರಾಕ್ರಮು, ಪ್ರತಿಯೊಂದು ಮನೆಯಲ್ಲೂ ಅನುರಣಿಸಲಿದೆ’’ ಎಂದವರು ಹೇಳಿದರು.

ಪ್ರಧಾನಿ ಮೋದಿ ಜತೆ ತ್ರಿಸೇನಾಪಡೆಗಳ ವರಿಷ್ಠ ಜನರಲ್ ಬಿಪಿನ್ ರಾವತ್ ಹಾಗೂ ಸೇನಾ ವರಿಷ್ಠ ಜನರಲ್ ಎಂ.ಎಂ. ನರ್ವಾಣೆ ಜೊತೆ ಹೆಲಿಕಾಪ್ಟರ್ ಮೂಲಕ ನಿಮುಗೆ ಬಂದಿಳಿದಿರುವ. ಹಿಮಾಲಯ ಪರ್ವತಶ್ರೇಣಿಯಲ್ಲಿರುವ ನಿಮು ಸೇನಾನೆಲೆಯು, 11 ಸಾವಿರ ಅಡಿ ಎತ್ತರದಲ್ಲಿದ್ದು, ಪಕ್ಕದಲ್ಲೇ ಸಿಂಧೂ ನದಿ ಹರಿಯುತ್ತಿದೆ.

ಹೈಲೆಟ್ಸ್

ಎಲ್ಲಾ ಕಾಲಗಳಲ್ಲಿಯೂ ವಿಸ್ತರಣಾವಾದಿಗಳು ಅಳಿದುಹೋಗಿದ್ದಾರೆಂಬುದಕ್ಕೆ ಇತಿಹಾಸವು ಪುರಾವೆಯಾಗಿದೆ’

ಭಾರತ ಮಾತೆಯ ಶತ್ರುಗಳು ನಿಮ್ಮ (ಭಾರತೀಯ ಯೋಧರ) ರೋಷಾಗ್ನಿ ಹಾಗೂ ವೀರಾವೇಶವನ್ನು ಕಂಡಿದ್ದಾರೆ.

ಲಡಾಕ್‌ನ ಪ್ರತಿಯೊಂದು ಸಂದುಗೊಂದುಗಳು, ಪ್ರತಿಯೊಂದು ಕಲ್ಲು, ಪ್ರತಿಯೊಂದು ನದಿ ಹಾಗೂ ಪ್ರತಿಯೊಂದು ಬೆಣಚುಕಲ್ಲುಗಳಿಗೂ ಕೂಡಾ ತಾವು ಭಾರತದ ಅವಿಭಾಜ್ಯ ಅಂಗವೆಂದು ತಿಳಿದಿದೆ.

ಹುತಾತ್ಮರಿಗೆ ನಮನ, ಗಾಯಾಳು ಯೋಧರಿಗೆ ಸೆಲ್ಯೂಟ್

ದಿಲ್ಲಿಯಿಂದ ಬೆಳಗ್ಗೆ 9:30ಕ್ಕೆ ಲೇಹ್‌ಗೆ ಆಗಮಿಸಿದ ಪ್ರಧಾನಿ ಮೊದಲಿಗೆ ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಚೀನಿ ಯೋಧರ ಜೊತೆ ನಡೆಸಿದ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಅರ್ಪಿಸಿದರು. ಆನಂತರ ಲೇಹ್‌ನಲ್ಲಿರುವ ಸೇನಾಸ್ಪತ್ರೆಯಲ್ಲಿ ಗಾಯಾಳು ಯೋಧರನ್ನು ಭೇಟಿಯಾಗಿ ಅವರ ಪರಾಕ್ರಮವನ್ನು ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.. ಈ ಸಂದರ್ಭದಲ್ಲಿ ಸೇನಾಧಿಕಾರಿಗಳು ಅವರಿಗೆ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ಪ್ರಸಕ್ತ ಸನ್ನಿವೇಶದ ಬಗ್ಗೆ ಪ್ರಧಾನಿಗೆ ವಿವರಿಸಿದರು. ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News