ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಬೇಕು: ಯು.ಟಿ.ಖಾದರ್

Update: 2020-07-03 11:00 GMT

ಮಂಗಳೂರು, ಜು.3: ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿ ಜಾಗದ ಕೊರತೆ ಅಥವಾ ಯಾವುದೇ ರೀತಿಯ ತಕರಾರು ಎದುರಾಗದಂತೆ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಸರ್ವಧರ್ಮಗಳಿಗೂ ಸೂಕ್ತವಾದ ಪ್ರತ್ಯೇಕ ಸ್ಥಳವನ್ನು ಗುರುತಿಸಿ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಗಳು ಅತ್ಯಗತ್ಯ ಎಂದರು.

ಜಿಲ್ಲೆಯಲ್ಲಿ ಕೋವಿಡ್ ಕೆಲಸಕ್ಕೆ ಅಂಬುಲೆನ್ಸ್‌ಗಳ ಕೊರತೆಯಿದ್ದು ಅದನ್ನು ಶೀಘ್ರ ನಿವಾರಿಸಬೇಕು. ನಗರದಲ್ಲಿ ಕೋವಿಡ್ ಸಾವು ಪ್ರಕರಣಗಳು ಇದೇ ರೀತಿ ಏರಿಕೆಯಾದರೆ ದನ ಮಾಡಲು ಕಷ್ಟವಾಗಲಿದೆ. ಈ ಕಾರಣದಿಂದ ಎಲ್ಲ ಧರ್ಮದವರಿಗೆ ಅನುಕೂಲವಾಗುವಂತೆ ನಗರ ಪ್ರದೇಶದಿದ ಸುಮಾರು 15ಕಿಲೋ ಮೀಟರ್ ದೂರದ ಜನವಸತಿಯಿಲ್ಲದ ಪ್ರದೇಶದಲ್ಲಿ ಪ್ರತ್ಯೇಕ ರುದ್ರಭೂಮಿ, ಖಬರ್‌ಸ್ತಾನ, ಸಮಾಧಿ ಮಾಡಲಿಕ್ಕೆ ಸರಕಾರ ತಕ್ಷಣ ಕ್ರಮಕೈಗೊಳ್ಳಲಿ ಎಂದರು.

ಆರೋಗ್ಯ ಸಚಿವರ ಜಿಲ್ಲೆಯಾದ ಬಳ್ಳಾರಿಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳನ್ನು ಅಮಾನವೀಯ ರೀತಿಯಲ್ಲಿ ನಡೆದುಕೊಂಡಿರುವುದು ಖಂಡನೀಯ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಉತ್ತಮ ರೀತಿಯಲ್ಲಿ ಗೌರವಪೂರ್ವಕವಾಗಿ ಶವಸಂಸ್ಕಾರ ನಡೆಸಲಾಗುತ್ತಿದ್ದು, ಇದೇ ಮಾರಿ ಮುಂದುವರಿಯಬೇಕು ಎಂದರು.

ಚೀನಾ ದೇಶವು ಭಾರತದ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ಪ್ರತಿಯಾಗಿ ಕೇಂದ್ರ ಸರಕಾರ ಕೇವಲ ಆ್ಯಪ್‌ಗಳನ್ನು ನಿಷೇಧಿಸುವುದರಿಂದ ಯಾವುದೇ ಪ್ರಯೋಜನವಾಗದು. ಅದರಿಂದ ಚೀನಾದ ವ್ಯಾಪಾರಿಯೊಬ್ಬನಿಗೆ ಸ್ವಲ್ಪ ನಷ್ಟವಾಗಿರಬಹುದು. ದೇಶದ ವಿರುದ್ಧ ಪಿತೂರಿ ನಡೆಸುವ ಚೀನಾ, ನೇಪಾಳದಂತಹ ರಾಷ್ಟ್ರಗಳಿಗೆ ಕ್ರಿಯೆಯ ಮೂಲಕ ಉತ್ತರ ನೀಡಬೇಕು. ಅದು ಬಿಟ್ಟು ಕೇಂದ್ರ ಸರಕಾರದ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಕುಂದು ತರುವ ಕೆಲಸವಾಗುತ್ತಿದೆ. ಅದು ಬಿಟ್ಟು ಚೀನಾದ ದೇಶದೊಂದಿಗಿನ ಆಮದು, ತುರ್ತು ನಿಷೇಧ ಮಾಡಲಿ ಎಂದರು.

ಟಿಕ್‌ಟಾಕ್ ಕಂಪನಿ ಪಿಎಂ ಪರಿಹಾರ ನಿಧಿಗೆ 30ಕೋಟಿ ರೂ. ನೀಡಿದೆ. ಇದೇ ರೀತಿ ನಾನಾ ಆ್ಯಪ್ ಕಂಪನಿಗಳು 80ರಿಂದ 90ಕೋಟಿ ರೂ. ಪಿಎಂಕೆ ನಿಧಿಗೆ ಅನುದಾನ ನೀಡಿದ್ದು ಅದರ ಮಾಹಿತಿಯನ್ನು ಜನತೆಗೆ ನೀಡಬೇಕು ಹಾಗೂ ಅದನ್ನು ಸರಕಾರ ಹಿಂತಿರುಗಿಸಬೇಕು ಎಂದವರು ಹೇಳಿದರು.

ಉಳ್ಳಾಲ ವ್ಯಾಪ್ತಿಯಲ್ಲಿ ರ್ಯಾಂಡಮ್ ಚೆಕ್ ಅಪ್ ಮಾಡಿದ ಬಳಿಕ ಸುಮಾರು 30ಪ್ರಕರಣಗಳು ಪತ್ತೆಯಾಗಿದ್ದು, ಅವರನ್ನು ಐಸೋಲೇಷನ್‌ಗೆ ಒಳಪಡಿಸಲಾಗಿದೆ. ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾರ್ಡ್‌ವಾರು ಸ್ವಯಂಸೇವಕ ತಂಡವನ್ನು ನೇಮಿಸಲಾಗಿದ್ದು, ಈ ಪಡೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

'ಕೋವಿಡ್ ನಿಯಂತ್ರಿಸಲಾಗದ ಕೇಂದ್ರದಿಂದ ದ್ವೇಷ ರಾಜಕಾರಣ'
ದೇಶಾದ್ಯಂತ ಕಳೆದ 6 ತಿಂಗಳಿನಿಂದ ಎನ್‌ಅರ್‌ಸಿ, ಕೋವಿಡ್, ಚೀನಾ ದಾಳಿ ಸೇರಿದಂತೆ ನಾನಾ ಪ್ರಕರಣಗಳು ಇಡೀ ದೇಶವನ್ನು ತಲ್ಲಣಗೊಳಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವ ಬದಲು ಕೇಂದ್ರ ಸರಕಾರ ಪ್ರಿಯಾಂಕ ಗಾಂಧಿ ವಿರುದ್ಧ ದ್ವೇಷ ರಾಜಕಾರಣ ಮಾಡಲು ಹೊರಟಿದೆ ಎಂದು ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರಪ್ರದೇಶದಲ್ಲಿ ಪ್ರಿಯಾಂಕ ಗಾಂಧಿಯವರ ವರ್ಚಸ್ಸು ಹೆಚ್ಚುತ್ತಿದ್ದಂತೆ ಕೇಂದ್ರ ಸರಕಾರವು ದ್ವೇಷ ರಾಜಕಾರಣಕ್ಕೆ ಹೊರಟು ದಿಲ್ಲಿಯ ನಿವಾಸವನ್ನು ಬಿಡಲು ಸೂಚನೆ ನೀಡಿದೆ. ವಾಜಪೇಯಿ ಸರಕಾರ ಇರುವಾಗಲೇ ಕೆಲವೊಂದು ಗಣ್ಯರಿಗೆ ಎಸ್‌ಪಿಜಿ ಭದ್ರತೆಯನ್ನು ಕಲ್ಪಿಸಿತ್ತು. ದಿಲ್ಲಿಯಲ್ಲಿ ಇದೇ ರೀತಿ ಎಷ್ಟೋ ಮಂದಿ ಈಗಲೂ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅದರ ಬಗ್ಗೆ ಯಾವುದೇ ಕ್ರಮವಾಗದೆ ಕೇವಲ ಈ ರೀತಿಯ ದ್ವೇಷ ರಾಜಕಾರಣವನ್ನು ಜನ ಒಪ್ಪುವುದಿಲ್ಲ ಎಂದು ಖಾದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News