ರೈತರಿಗೆ ಸಹಕಾರಿ ಸಂಘಗಳ ಮೂಲಕ 14,500 ಕೋಟಿ ರೂ. ಸಾಲ ನೀಡುವ ಗುರಿ: ಸಚಿವ ಎಸ್.ಟಿ. ಸೋಮಶೇಖರ್

Update: 2020-07-03 11:33 GMT

ಮಂಗಳೂರು,ಜು .3: ರಾಜ್ಯದಲ್ಲಿ ರೈತರಿಗೆ ಈ ಬಾರಿ ಸಹಕಾರಿ ಸಂಘಗಳ ಮೂಲಕ 14,500 ಕೋಟಿ ರೂ. ಸಾಲ ನೀಡುವ ಗುರಿಹೊಂದಿದೆ. ಕಳೆದ ವರ್ಷ 13,000 ಕೋಟಿ ರೂಪಾಯಿ ಸಾಲವನ್ನು ಸಹಕಾರಿ ಸಂಘಗಳ ಮೂಲಕ ನೀಡಲಾಗಿತ್ತು ಎಂದು ರಾಜ್ಯ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಅವರು ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡುತ್ತಿದ್ದರು.

ರೈತರಿಗೆ ಈ ಬಾರಿ ಹೆಚ್ಚು ಸಾಲ ನೀಡುವ ಗುರಿಹೊಂದಿದ್ದು, ಈ ಹಿನ್ನೆಲೆಯಲ್ಲಿ ನಬಾರ್ಡ್ ಮೂಲಕ ಹೆಚ್ಚುವರಿ ಸಾಲ ನೀಡಲು ಮನವಿ ಸಲ್ಲಿಸಿದ್ದು, ಆ ಪ್ರಕಾರ ನಬಾರ್ಡ್ ಈ ಬಾರಿ ಹೆಚ್ಚುವರಿಯಾಗಿ 1700 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯದ 21 ಸಹಕಾರಿ ಸಂಘಗಳ ಮೂಲಕ 4,227 ಕೋಟಿ ರೂ. ಸಾಲವನ್ನು ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಮತ್ತು ಸ್ವಸಹಾಯ ಸಂಘಗಳ ಮೂಲಕ ರೈತರಿಗೆ ನೀಡಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಸಿಎಂ ಪರಿಹಾರ ನಿಧಿಗೆ 53 ಕೋಟಿ ರೂ. ಕೊಡುಗೆ: ರಾಜ್ಯ ಸರಕಾರ ಇಲಾಖೆಯ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ರಾಜ್ಯದ ವಿವಿಧ ಸಹಕಾರಿ ಸಂಘಗಳ ಮೂಲಕ ಸಂಗ್ರಹಿಸಿದ 53 ಕೋಟಿ ರೂ. ಕೊಡುಗೆಯನ್ನು ನೀಡಲಾಗಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯತರಿಗೆ ಫ್ರೋತ್ಸಾಹ ಧನ: ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 42,680 ಆಶಾ ಕಾರ್ಯಕರ್ತೆಯರಿಗೆ ತಲಾ 3000 ರೂ. ರಂತೆ ಪೋತ್ಸಾಹ ಧನವನ್ನು ಸಹಕಾರ ಇಲಾಖೆಯ ಮೂಲಕ ನೀಡಲು ನಿರ್ಧರಿಸಿದ್ಧು ಆ ಪ್ರಯುಕ್ತ ಇದುವರೆಗೆ 28,138 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಎಪಿಎಂಸಿ ಮಾರುಕಟ್ಟೆ ಸ್ಥಳಾಂತರದ ಸಮಸ್ಯೆ ಸರಿಪಡಿಸಲು ಸಮಿತಿ ರಚನೆ: ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿದ ಬಳಿಕ ಉಂಟಾಗಿರುವ ಸಮಸ್ಯೆ ಹಾಗೂ ಬೈಕಂಪಾಡಿಯ ಎಪಿಎಂಸಿ ಯಾರ್ಡ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಸಂಸದರು,ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಸೇರಿದಂತೆ ಸಂಬಂಧಿಸಿದ ಹಲವರನ್ನು ಸೇರಿಸಿ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯ ಅಭಿಪ್ರಾಯವನ್ನು ಪರಿಗಣಿಸಿದ ಬಳಿಕ ಎಪಿಎಂಸಿ ಬೈಕಂಪಾಡಿಯ ಯಾರ್ಡ್ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐ ವ್ಯಾಪ್ತಿಗೆ ಸೇರ್ಪಡೆ ಸರಿಯಾದ ತೀರ್ಮಾನ: ಕೆಲವು ಸಹಕಾರಿ ಸಂಘಗಳಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳನ್ನು ಆರ್‌ಬಿಐಗೆ ಸೇರ್ಪಡೆ ಮಾಡಲು ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಗ್ರಾಹಕರು ನೀಡುವ ತಮ್ಮ ಠೇವಣಿ ಹಣಕ್ಕೆ ಭದ್ರತೆ ನೀಡುವ ನಿಟ್ಟಿನಲ್ಲಿ ಇದೊಂದು ಉತ್ತಮ ನಿರ್ಧಾರವಾಗಿದ್ದು, ಸ್ವಾಗತಾರ್ಹವಾಗಿದೆ. ಇದರಿಂದಾಗಿ ಮುಂದೆ ಠೇವಣಿ ಹಣ ಶೇ. 100ರಷ್ಟು ಸುರಕ್ಷಿತವಾಗುತ್ತದೆ. ಸಾಲ ನೀಡಿಕೆಯಲ್ಲೂ ಸಾಕಷ್ಟು ಬದಲಾವಣೆಯಾಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ಮೈಕ್ರೊ ಫೈನಾನ್ಸ್ ಸಾಲದ ಸಮಸ್ಯೆ ಪರಿಹಾರಕ್ಕೆ ಮಾತುಕತೆ: ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆದಿರುವ ಸಾಲಗಾರರ ಸಾಲ ಸಮಸ್ಯೆಗೆ ಸಂಬಂಧಿಸಿದಂತೆ ಸರಕಾರದ ಹಂತದಲ್ಲಿ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡು ಕೊಳ್ಳುವ ಬಗ್ಗೆ ಚಿಂತನೆ ಇದೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್,ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಜಿ, ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ, ಟಿ.ಜಿ ರಾಜಾರಾಮ ಭಟ್, ಸದಾಶಿವ ಉಳ್ಳಾಲ್, ಶಶಿ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News