ಕೊರೋನ ವೈರಸ್ ಹಿನ್ನೆಲೆ: ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧ ವಿಸ್ತರಣೆ

Update: 2020-07-03 14:58 GMT

ಹೊಸದಿಲ್ಲಿ, ಜು.3: ಕೊರೋನ ವೈರಸ್ ಹಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಸಂದರ್ಭದಲ್ಲಿ ಹೇರಲಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನಗಳ ಮೇಲಿನ ನಿರ್ಬಂಧವನ್ನು ಕೇಂದ್ರ ಸರಕಾರ ಜುಲೈ 31ರವರೆಗೆ ವಿಸ್ತರಿಸಿದೆ.

 ಈ ಬಗ್ಗೆ ಕೇಂದ್ರ ನಾಗರಿಕ ವಿಮಾಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಶುಕ್ರವಾರ ಹೇಳಿಕೆಯೊಂದನ್ನು ನೀಡಿ, ಅಂತಾರಾಷ್ಟ್ರೀಯ ವಿಮಾನಯಾನಗಳ ಮೇಲಿನ ನಿಷೇಧವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದ್ದು, ಕೇವಲ ಸರಕು ಸಾಗಣೆ ಹಾಗೂ ಡಿಜಿಸಿಎ ಅನುಮತಿ ಪಡೆದಿರುವ ವಿಮಾನಗಳಿಗೆ ಮಾತ್ರವೇ ಅಂತಾರಾಷ್ಟ್ರೀಯ ಹಾರಾಟಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

  ಡಿಜಿಸಿಎ ಜೂನ್ 26ರಂದು ನೀಡಿದ ಹೇಳಿಕೆಯೊಂದರಲ್ಲಿ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ಜುಲೈ 15ರವರೆಗೆ ನಿಷೇಧಿಸಿರುವುದಾಗಿ ತಿಳಿಸಿತ್ತು. ಇದೀಗ ಈ ಅವಧಿಯನ್ನು ಜುಲೈ ತಿಂಗಳ ಕೊನೆಯವರೆಗೆ ವಿಸ್ತರಿಸಿದೆ.

  ಆದಾಗ್ಯೂ ವಂದೇ ಭಾರತ್ ಮಿಶನ್‌ನಡಿ, ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಏರ್‌ ಇಂಡಿಯಾ ಹಾಗೂ ದೇಶದಲ್ಲಿನ ಖಾಸಗಿ ವಿಮಾನಯಾನ ಸಂಸ್ಥೆಗಳು ನಡೆಸುವ ಅಂತಾರಾಷ್ಟ್ರೀಯ ಹಾರಾಟಗಳು ಮುಂದುವರಿಯಲಿವೆ ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.

   ಕೊರೋನ ವೈರಸ್ ಹರಡುವುದನ್ನು ತಡೆಯಲು ಮಾರ್ಚ್ 24ರಂದು ಕೇಂದ್ರ ಸರಕಾರ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಭಾರತದ ಎಲ್ಲಾ ಅಂತಾರಾಷ್ಟ್ರೀಯ ಹಾಗೂ ಅಂತರ್‌ದೇಶೀಯ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆನಂತರ ಮೇ 25ರಂದು ಅಂತರ್‌ದೇಶಿಯ ವಿಮಾನಗಳ ಹಾರಾಟವು ಆರಂಭಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News