ಹರೇಕಳ: ಹತ್ತು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಗೆ ಗ್ರಾಮಸ್ಥರ ತೀರ್ಮಾನ

Update: 2020-07-03 11:53 GMT

ಕೊಣಾಜೆ: ಮಂಗಳೂರು ತಾಲೂಕಿನ ಹರೇಕಳ ಗ್ರಾಮದಲ್ಲಿ ಈಗಾಗಲೇ 5 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿರುವಂತೆ ಆತಂಕಗೊಂಡಿರುವ ಗ್ರಾಮಸ್ಥರು, ಇನ್ನು ಮುಂದಕ್ಕೆ ಸಾಮುದಾಯಿಕವಾಗಿ ರೋಗ ಹರಡದಂತೆ ತಡಯಲು ಶುಕ್ರವಾರ ಸಭೆ ಸೇರಿ ಇಡೀ ಗ್ರಾಮವನ್ನು ಹತ್ತು ದಿನಗಳ ತನಕ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಿದ್ದಾರೆ.

ಹರೇಕಳ ಪಂಚಾಯತ್ ಅಧ್ಯಕ್ಷರಾದ ಅನಿತಾ ಡಿಸೋಜ ಉಪಾಧ್ಯಕ್ಷರಾದ ಮಹಾಬಲ ಹೆಗ್ಡೆ ಡೆಬ್ಬೇಲಿ, ಬಿಜೆಪಿಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು ಮತ್ತು ಪಂಚಾಯತ್ ನ ಇತರ ಸದಸ್ಯರು, ಊರಿನ ಗಣ್ಯರು ಸಭೆ ಸೇರಿ ಜು.6ರಿಂದ ಜುಲೈ 15ರ ತನಕ ಹರೇಕಳ ಗ್ರಾಮದ ಗಡಿಗಳನ್ನು ಬಂದ್ ಮಾಡಿ ಸಂಪೂರ್ಣ ಗ್ರಾಮವನ್ನು ಲಾಕ್ ಡೌನ್ ಮಾಡುವ ಹಾಗೂ ಮುಂಜಾಗ್ರತಾ ಕ್ರಮಗಳ‌ ಬಗ್ಗೆ  ತೀರ್ಮಾನ ಮಾಡಿದ್ದಾರೆ.

ಸಭೆಯಲ್ಲಿ ಗ್ರಾಮದ ಯುವಕರನ್ನು ಒಳಗೊಂಡ ಕೊರೋನ ವಾರಿಯರ್ಸ್ ತಂಡ ರಚಿಸಿ, ಸೋಂಕು ಹರಡದಂತೆ ತಡೆಗಟ್ಟುವ ಜವಾಬ್ದಾರಿಯನ್ನು ವಹಿಸಿಲಾಯಿತು.

ಮುಖಂಡ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ಜಲಮಾರ್ಗದ ಜೊತೆ ಬಸ್ಸುಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಹೊರಗಿನ ಖಾಸಗಿ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಅತ್ಯಗತ್ಯ ಕೆಲಸ, ಕಾರ್ಯಗಳಿಗೆ ಹೊರಗೆ ಹೋಗುವವರು ಸೂಕ್ತ ತಪಾಸಣೆ ನಡೆಸಿ, ಕೆಲಸಕ್ಕೆ ಹೋಗುವ ಬಗ್ಗೆ ಕಾರಣ ನೀಡಬೇಕು ಎಂದು ತಿಳಿಸಿದರು.

ಪಂಚಾಯತ್ ಅಧ್ಯಕ್ಷೆ ಅನಿತಾ ಡಿಸೋಜ ಮಾತನಾಡಿ, ಗ್ರಾಮದಲ್ಲಿರುವ ಎಲ್ಲಾ ಅಂಗಡಿಗಳು 12 ಗಂಟೆಗೆ ಬಂದ್ ಮಾಡಲಾಗುತ್ತಿದ್ದು, ಹೊಟೇಲುಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ವಯಸ್ಕರು, ಮಕ್ಕಳು ಮನೆಯಿಂದ ಹೊರಬರಬಾರದು.‌ ಶನಿವಾರದಿಂದ ಎಲ್ಲಾ ಮನೆಗಳಿಗೆ ಸ್ಯಾನಿಟೈಸರ್ ಸಿಂಪಡಿಕೆ ಮಾಡಲಾಗುವುದು. ಈ ನಿರ್ಣಯ ಧಾರ್ಮಿಕ, ರಾಜಕೀಯ, ಸರ್ವಪಕ್ಷ  ಮುಖಂಡರ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಮಲಾರ್ ಮಾತನಾಡಿ, 40 ಜನ ವಾರಿಯರ್ಸ್‌ ತಂಡ ರಚನೆ ಮಾಡಲಾಗಿದ್ದು, ಗಡಿಪ್ರದೇಶ ಗುರುತಿಸಿ ಅಲ್ಲಿ ತಂಡ ಕಾರ್ಯ ನಿರ್ವಹಿಸಲಿದೆ. ಅಗತ್ಯ ಇರುವವರು ಸಕಾರಣ ನೀಡಿ ಹೊರ ಹೋಗುವ ಮತ್ತು ಒಳಬರುವ ಅವಕಾಶ ನೀಡಲಾಗುವುದು. ಈ ಕಾರ್ಯಕ್ಕೆ ಗ್ರಾಮಸ್ಥರ ಸಹಕಾರ ಇದ್ದಾಗ ಕೊರೋನ ನಿಯಂತ್ರಣ ಸಾಧ್ಯ ಎಂದರು.

ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಉಪಾಧ್ಯಕ್ಷ ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಸದಸ್ಯರಾದ ಬದ್ರುದ್ದೀನ್ ಫರೀದ್ ನಗರ, ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ಬಶೀರ್ ಉಂಬುದ, ಎಂ.ಪಿ.ಮಜೀದ್, ಉಳಿದೊಟ್ಟು, ಮುಖಂಡರಾದ‌ ಬಶೀರ್, ವಾಮನ್ ರಾಜ್ ಪಾವೂರು, ಇಮ್ತಿಯಾಝ್, ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News