ಕೊರೋನ ವಿರುದ್ಧದ ಹೋರಾಟ: ಕರ್ನಾಟಕದ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರಶಂಸೆ

Update: 2020-07-03 14:56 GMT

ಹೊಸದಿಲ್ಲಿ,ಜು.3: ಕೋವಿಡ್-19 ವಿರುದ್ಧ ಹೋರಾಟದಲ್ಲಿ ಕರ್ನಾಟಕದ ಯಶಸ್ಸಿನಲ್ಲಿ ರಾಜ್ಯದ ಸುಮಾರು 42,000 ಆಶಾ ಕಾರ್ಯಕರ್ತೆಯರ ಪಾತ್ರವು ಪ್ರಮುಖವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಪ್ರಶಂಸಿಸಿದೆ.

ರಾಜ್ಯದಲ್ಲಿ ಮನೆಮನೆ ಸಮೀಕ್ಷೆ, ಸೋಂಕು ಲಕ್ಷಣಗಳಿಗಾಗಿ ಅಂತರರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಮತ್ತು ಸಮುದಾಯದ ಇತರರ ತಪಾಸಣೆ ಕಾರ್ಯಗಳಲ್ಲಿ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಅದು ಹೇಳಿದೆ.

ಕೆಲವು ಸಮುದಾಯಗಳಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಯಸ್ಸಾದವರು, ಇತರ ಕಾಯಿಲೆಗಳನ್ನು ಹೊಂದಿದವರು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿಯುಳ್ಳವರು ಇರುವ ಕುಟುಂಬಗಳನ್ನು ಗುರುತಿಸಲು ಒಂದು ಬಾರಿಯ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು,ಈವರೆಗೆ ಸುಮಾರು 1.59 ಮನೆಗಳು ಸಮೀಕ್ಷೆಗೊಳಗಾಗಿವೆ. ಆಶಾ ಕಾರ್ಯಕರ್ತೆಯರು ತಮ್ಮ ಪ್ರದೇಶದಲ್ಲಿಯ ಇಂತಹವರ ಮೇಲೆ ಸತತ ನಿಗಾ ಇರಿಸುತ್ತಿದ್ದಾರೆ. ಇನ್‌ಫ್ಲುಯೆಂಜಾ ಮತ್ತು ತೀವ್ರ ದೀರ್ಘಕಾಲಿಕ ಉಸಿರಾಟ ಸಮಸ್ಯೆ (ಸಾರಿ)ಯಂತಹ ಅನಾರೋಗ್ಯಗಳನ್ನು ಹೊಂದಿರುವವರು ಮತ್ತು ರಾಜ್ಯ ಆರೋಗ್ಯ ಇಲಾಖೆಯ ಸಹಾಯವಾಣಿಗಳಿಗೆ ಕರೆ ಮಾಡುವ ಹೆಚ್ಚಿನ ಅಪಾಯದ ಗುಂಪಿನಲ್ಲಿರುವವರ ಮನೆಗಳಿಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡುತ್ತಿದ್ದಾರೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಆಶಾ ಕಾರ್ಯಕರ್ತೆಯರು ಕೋವಿಡ್-19 ಮತ್ತು ಇತರ ಅನಾರೋಗ್ಯಗಳಿಗೆ ಸಂಬಂಧಿಸಿದ ಸೇವೆಗಳ ಕುರಿತು ಪಂಚಾಯತ ಅಭಿವೃದ್ಧಿ ಅಧಿಕಾರಿ ನೇತೃತ್ವದ ಗ್ರಾಮೀಣ ಕಾರ್ಯಪಡೆಯ ಭಾಗವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News