ದ.ಕ. ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೋನ ಸೋಂಕಿತರ ಸಂಖ್ಯೆ

Update: 2020-07-03 16:01 GMT

ಮಂಗಳೂರು, ಜು.3: ದ.ಕ. ಜಿಲ್ಲೆಯಲ್ಲಿ ಕೊರೋನ ಹರಡುವಿಕೆ ತೀವ್ರಗೊಂಡಿದ್ದು, ಶುಕ್ರವಾರ ವ್ಯಕ್ತಿಯನ್ನು ಬಲಿ ಪಡೆಯುವ ಜೊತೆಗೆ, ಒಂದೇ ದಿನ 97 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಜೂ.28ರಂದು 97 ಮಂದಿಗೆ ಸೋಂಕು ತಗುಲಿತ್ತು. ಜು.1ರಂದು 90 ಪ್ರಕರಣಗಳು ಪತ್ತೆಯಾಗಿದ್ದವು. ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1020ಕ್ಕೆ ಏರಿಕೆಯಾಗಿದೆ. ಇದರಲ್ಲಿ 10 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಸೋಂಕು ಹೆಚ್ಚಳದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮೂಲ ಪತ್ತೆಯಾಗದಿರುವ ಪ್ರಕರಣಗಳು ಹೆಚ್ಚುತ್ತಿರುವುದು ಭೀತಿ ಮೂಡಿಸಿದೆ.

ಜಿಲ್ಲೆಯಲ್ಲಿ ಶುಕ್ರವಾರ ಸ್ವೀಕೃತವಾದ ವರದಿಯಲ್ಲಿನ ಸೋಂಕಿತರ ಪೈಕಿ ಮೂವರು ಸೌದಿ ಅರೇಬಿಯ, ದುಬೈನಿಂದ ಬಂದವರು. ಐಎಲ್‌ಐ 28, ಮೂಲ ಪತ್ತೆಯಾಗದ 41, ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲ ಸೋಂಕಿತರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮೂಲ ನಿಗೂಢ ಪ್ರಕರಣ ಹೆಚ್ಚಳ: ದ.ಕ. ಜಿಲ್ಲೆಯಲ್ಲಿ ಸೋಂಕು ತಗುಲಿದವರಲ್ಲಿ ಮೂಲ ನಿಗೂಢವಾಗಿದ್ದವರ ಸಂಖ್ಯೆಯೇ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಸಹಜವಾಗಿಯೇ ಭೀತಿ ಉಂಟು ಮಾಡಿದೆ.

ಶುಕ್ರವಾರ ಒಂದೇ ದಿನ 41 ನಿಗೂಢ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ ಆರು, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್ ಪ್ರೀ-ಸರ್ಜರಿ ಸ್ಯಾಂಪಲ್‌ನಲ್ಲಿ ಏಳು, ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್ ಕಮ್ಯೂನಿಟಿ ರ್ಯಾಂಡಮ್ ಸ್ಯಾಂಪಲ್‌ನಲ್ಲಿ 28 ಮಂದಿಗೆ ಸೋಂಕು ತಗುಲಿದೆ. ಈ ಮೊದಲು ಬೆರಳೆಣಿಕೆ ಸಂಖ್ಯೆಯಲ್ಲಿದ್ದ ನಿಗೂಢ ಪ್ರಕರಣಗಳು ಅರ್ಧ ಶತಕದತ್ತ ಮುನ್ನುಗ್ಗುತ್ತಿರುವುದು ಬಹಳ ಆತಂಕಕಾರಿ ನಡೆಯಾಗಿದೆ. 

26 ಮಂದಿ ಗುಣಮುಖ: ಸಮಾಧಾನಕರ ಬೆಳವಣಿಗೆಯಲ್ಲಿ ಶುಕ್ರವಾರ 11 ವರ್ಷದ ಬಾಲಕಿ ಸಹಿತ 26 ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 503 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಐಸಿಯುನಲ್ಲಿ ಐವರು: 57 ವರ್ಷದ ಮಹಿಳೆ ಲಿವರ್ ಕಾಯಿಲೆ, ಡಯಾಬಿಟಿಸ್, ಹೃದಯರೋಗ ಹಾಗೂ ನ್ಯುಮೋನಿಯದಿಂದ ಬಳಲುತ್ತಿದ್ದಾರೆ. ಇನ್ನು 78 ವರ್ಷದ ವೃದ್ಧರೊಬ್ಬರು ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪಾರ್ಕಿನ್‌ಸನ್ ಕಾಯಿಲೆ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದಾರೆ. 52 ವರ್ಷದ ಮಹಿಳೆಯು ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.  38 ವರ್ಷದ ಪುರುಷರೊಬ್ಬರು ಅಸ್ತಮಾದಿಂದ ಬಳಲುತ್ತಿದ್ದರು. 50 ವರ್ಷದ ಮಹಿಳೆಯು ನ್ಯೂಮೊನಿಯದಿಂದ ಬಳಲುತ್ತಿದ್ದರು. ಇವರನ್ನೂ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶುಕ್ರವಾರ ಒಟ್ಟು 425 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 97 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 280 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 427ಮಂದಿಯ ವರದಿ ಬರಲು ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News