ಉಡುಪಿಯಲ್ಲಿ ಕೊರೋನ ಆತಂಕದ ಮಧ್ಯೆ ಮುಗಿದ ಎಸೆಸೆಲ್ಸಿ ಪರೀಕ್ಷೆ

Update: 2020-07-03 17:08 GMT

ಉಡುಪಿ, ಜು.3: ಕೊರೋನ ಆತಂಕದ ಮಧ್ಯೆ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 51 ಕೇಂದ್ರಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಇಂದಿಗೆ ಕೊನೆಗೊಂಡಿದೆ. ಇಂದು ನಡೆದ ತೃತೀಯ ಭಾಷೆ ಅಂತಿಮ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು 12,812 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಈ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 13603 ವಿದ್ಯಾರ್ಥಿಗಳು ನೋಂದಾಯಿ ಸಿದ್ದು, ಇದರಲ್ಲಿ ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 587 ಮತ್ತು ಹಾಜರಾತಿ ಇಲ್ಲದೆ ಹಾಲ್ ಟಿಕೆಟ್‌ನಿಂದ ವಂಚಿತರಾದ 94 ಮಂದಿ ಸೇರಿದ್ದಾರೆ. ಇವರನ್ನು ಹೊರತು ಪಡಿಸಿ ಒಟ್ಟು 110 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಪರೀಕ್ಷೆಗೆ ದಾಖಲಾತಿ ಮಾಡಿಕೊಂಡ ಒಟ್ಟು 429 ಖಾಸಗಿ ವಿದ್ಯಾರ್ಥಿಗಳ ಪೈಕಿ 349 ಮಂದಿ ಪರೀಕ್ಷೆಗೆ ಹಾಜರಾಗಿ, 80 ಮಂದಿ ಗೈರು ಹಾಜರಾಗಿದ್ದಾರೆ. ಹೊರ ಜಿಲ್ಲೆಗಳಿಂದ ಬಂದು ನೋಂದಾಯಿಸಿಕೊಂಡ ಎಲ್ಲ 82 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.

ಮತ್ತೆ ನಾಲ್ವರಿಗೆ ಅನಾರೋಗ್ಯ
ಇಂದಿನ ಪರೀಕ್ಷೆಗೆ ಹಾಜರಾದ ಮತ್ತೆ ನಾಲ್ಕು ಮಂದಿ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡು ಬಂದಿದೆ. ಹೀಗೆ ಬೈಂದೂರು- 6, ಕುಂದಾಪುರ- 6, ಕಾರ್ಕಳ-1, ಬ್ರಹ್ಮಾವರ -3, ಉಡುಪಿ ವಲಯದ ಇಬ್ಬರು ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಿದ್ದಾರೆ.

ಕಂಟೈನ್‌ಮೆಂಟ್ ವಲಯಗಳಿಂದ ಒಟ್ಟು 10 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇವರೆಲ್ಲರು ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆದರು. ಹೆಜಮಾಡಿ, ಕುಂದಾಪುರ ಹಾಗೂ ಬೈಂದೂರು ಕೇಂದ್ರಗಳಲ್ಲಿ ಸೋಂಕಿತ ಎಸೆಸೆಲ್ಸಿ ವಿದ್ಯಾರ್ಥಿನಿಗಳೊಂದಿಗೆ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯಲ್ಲೂ ಕೂಡ ಬೇರೆ ಕೋಣೆಯ ವ್ಯವಸ್ಥೆ ಮಾಡಲಾಗಿತ್ತು.

ಕೊರೋನ ಭೀತಿಯ ಮಧ್ಯೆ ಪರೀಕ್ಷೆ ಬರೆದ ಜಿಲ್ಲೆಯ ವಿದ್ಯಾರ್ಥಿಗಳು ಇದೀಗ ನಿರಾಳರಾಗಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಮೂವರು ವಿದ್ಯಾರ್ಥಿನಿಯರಲ್ಲಿ ಕೊರೋನ ಸೋಂಕು ದೃಢಪಟ್ಟು, ಹೆಜಮಾಡಿ, ಬೈಂದೂರಿನ ವಿದ್ಯಾರ್ಥಿನಿಯರು ನಾಲ್ಕು ಹಾಗೂ ಕುಂದಾಪುರ ವಿದ್ಯಾರ್ಥಿನಿ ಮೂರು ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದಾರೆ. ಇವರಿಗೆ ಆಗಸ್ಟ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಯಲ್ಲಿ ಫ್ರೇಷರ್ ಆಗಿ ಪರಿಗಣಿಸಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಹಿಂದಿನಂತಿರಲಿಲ್ಲ. ಒಂದಿಷ್ಟು ಧಾವಂತ, ಚಡಪಡಿಕೆ, ಗೊಂದಲ, ಭಯಮಿಶ್ರಿತ ವಾತಾವರಣ ಎಲ್ಲರಲ್ಲೂ ಇತ್ತು. ಆದರೆ ಎಲ್ಲರ ಸಹಕಾರದಿಂದ ಯಾವುದೇ ಸಮಸ್ಯೆ ಇಲ್ಲದೆ ಇಂದು ಪರೀಕ್ಷೆ ನಿರಾಳವಾಗಿ ಮುಗಿದಿದೆ. ಇದರಲ್ಲಿ ಭರವಸೆ ತುಂಬಿದ ಪೋಷಕರಿಗೆ, ಪ್ರೀತಿಯಿಂದ ಕರೆತಂದ ರಿಕ್ಷಾ ಚಾಲಕರಿಗೆ, ಆರೋಗ್ಯ ಕೇಂದ್ರದ ದಾದಿಯರು, ಆಶಾ ಕಾರ್ಯಕರ್ತೆರು, ಸ್ಕೌಟ್-ಗೈಡ್ಸ್ ವಿದ್ಯಾರ್ಥಿಗಳು, ಆರಕ್ಷಕರು, ಶಿಕ್ಷಕರು ಸೇರಿದಂತೆ ಎಲ್ಲರಿಗೂ ಕೃತಜ್ಞತೆಗಳು.
-ಶೇಷಶಯನ ಕಾರಿಂಜ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ.

ಪರೀಕ್ಷೆ ಆರಂಭಕ್ಕೆ ಮೊದಲು ನಮಗೂ ಕೊರೋನ ಬರಬಹುದೇ ಎಂಬ ಆತಂಕ ಇತ್ತು. ನಾವು ಹೇಗೆ ಪರೀಕ್ಷೆ ಬರೆಯುವುದು ಎಂಬ ಭಯ ಕೂಡ ಕಾಡುತ್ತಿತ್ತು. ಆದರೆ ಪರೀಕ್ಷಾ ಕೇಂದ್ರಕ್ಕೆ ಬಂದು ನೋಡಿದಾಗ ಎಲ್ಲವೂ ಅಚ್ಚು ಕಟ್ಟಾಗಿತ್ತು. ಮೊದಲ ಪರೀಕ್ಷೆಯಲ್ಲಿಯೇ ನಮ್ಮಲ್ಲಿ ಕೊರೋನ ಭೀತಿ ದೂರ ಆಗಿತ್ತು. ಉತ್ತಮವಾಗಿ ಪರೀಕ್ಷೆ ಬರೆದಿದ್ದೇವೆ.
-ವರ್ಷ ಕೋಟೇಶ್ವರ, ಎಸೆಸೆಲ್ಸಿ ವಿದ್ಯಾರ್ಥಿನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News