ಕೆ.ಕೆ.ಎಂ.ಎ ಕರ್ನಾಟಕ ಶಾಖೆಯ ಬಾಡಿಗೆ ವಿಮಾನ ಜುಲೈ 4ರಂದು ಮಂಗಳೂರಿಗೆ

Update: 2020-07-03 17:15 GMT

ಮಂಗಳೂರು: ಕೆ.ಕೆ.ಎಂ.ಎ ಎಂದೇ ಜನಪ್ರಿಯವಾಗಿರುವ ಕುವೈಟ್ ನ ಪ್ರಸಿದ್ದ ಸಾಮುದಾಯಿಕ ಮತ್ತು ಸಾಮಾಜಿಕ ಸಂಘಟನೆಯಾಗಿರುವ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಇದರ ಕರ್ನಾಟಕ ಶಾಖೆಯ ವತಿಯಿಂದ ಕರ್ನಾಟಕಕ್ಕೆ ಮೊದಲನೇ ಖಾಸಗಿ ಬಾಡಿಗೆ ವಿಮಾನವು ಮಂಗಳೂರಿಗೆ ಜುಲೈ 4 ರಂದು ಕುವೈಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದೆ.

ಭಾರತೀಯ ಮೂಲದ ಇಂಡಿಗೋ ಸಂಸ್ಥೆಯ ವಿಮಾನವು 165 ಅನಿವಾಸಿ ಕನ್ನಡಿಗರನ್ನು ಮರಳಿ ತಾಯಿ ನಾಡಿಗೆ ಹೊತ್ತು ತರಲಿದೆ. ಈ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ ಹಾಗೂ ತಾಯಿನಾಡಿನಲ್ಲಿ ಮರಣ ಹೊಂದಿದ ವ್ಯಕ್ತಿಯ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರಿಗೂ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ಆಹಾರ ಮತ್ತು ಸುರಕ್ಷಿತ ಪೊಟ್ಟಣವನ್ನು ನೀಡಲಾಗುತ್ತದೆ.

"ಅನಿವಾಸಿ ಕನ್ನಡಿಗರಿಗೆ ಖಾಸಗಿ ಚಾರ್ಟಡ್ ವಿಮಾನ ಸೌಲಭ್ಯವನ್ನು ಒದಗಿಸುವಲ್ಲಿ ಎಲ್ಲಾ ಭಾರತೀಯ ಪ್ರಾಧಿಕಾರ ಸಂಸ್ಥೆಗಳು ಉತ್ತಮ ಸಹಕಾರ ನೀಡಿದ್ದು, ಜೂನ್ 27 ರಂದು ತೆರಳಬೇಕಾಗಿದ್ದ ವಿಮಾನವನ್ನು ತಾಂತ್ರಿಕ ಕಾರಣದಿಂದಾಗಿ 4 ಜುಲೈಗೆ ಮುಂದೂಡಲಾಗಿದೆ. ಇದಕ್ಕೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು MLC ಕ್ಯಾಪ್ಟನ್ ಗಣೇಶ್ ಪುರಾಣಿಕ್ ರವರು ಸಹಕಾರ ನೀಡಿದ್ದು, ಅವರಿಗೆ ಕೃತಜ್ಞತೆ ಯನ್ನು ಸಲ್ಲಿಸುತ್ತೇವೆ ಮತ್ತು ಕುವೈಟ್ ನಲ್ಲಿ ಮೋಹನ್ ದಾಸ್ ಕಾಮತ್ ಮತ್ತು ಸತೀಶ್ ಚಂದ್ರ ಶೆಟ್ಟಿಯಂತಹ ಸಾಮಾಜಿಕ ಸೇವಾಕಾರ್ಯಕರ್ತರು ಹಾಗೂ ಭಾರತದಲ್ಲಿ ಜಿ.ಎ. ಬಾವ, ಮಂಗಳೂರು ಶಾಸಕರಾದ ಯು.ಟಿ.ಖಾದರ್ ಮತ್ತು ಆರತಿ ಕೃಷ್ಣರವರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ' ಎಂದು ಕೆ.ಕೆ.ಎಂ.ಎ ಪದಾಧಿಕಾರಿಗಳು ತಿಳಿಸಿದ್ದಾರೆ.

ಕೆ.ಕೆ.ಎಂ ಕರ್ನಾಟಕ ಶಾಖೆಯ ತಂಡದ ಸದಸ್ಯರ ಅವಿರತ ಶ್ರಮದಿಂದ ಯಾವುದೇ ತೊಂದರೆ ಇಲ್ಲದೇ ಚಾರ್ಟಡ್ ವಿಮಾನದ ಬುಕ್ಕಿಂಗ್ ಹಣ ಸಂಗ್ರಹ ಮತ್ತು ಅವರ ದಾಖಲೆಗಳ ಸಂಗ್ರಹಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಕೆ.ಕೆ.ಎಂ.ಎ ಕರ್ನಾಟಕ ಅಧ್ಯಕ್ಷ S.M. ಮೊಹಮ್ಮದ್ ಅಝರ್ ಅವರು ತಿಳಿಸಿದ್ದಾರೆ

ಪ್ರಯಾಣಿಕರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆ.ಕೆ.ಎಂ.ಎ. ಹೆಲ್ಪ್ ಡೆಸ್ಕ್ ತಂಡವು ನಿರಂತರ ಕಾರ್ಯ ನಿರ್ವಹಿಸಿದ್ದು, ಕುವೈಟ್ ನಲ್ಲಿ ಟಿಕೆಟ್ ಗೆ‌ ನಗದು ಹಣ ಪಾವತಿಸುವ ಪ್ರಯಾಣಿಕರ ವಾಸಸ್ಥಳಕ್ಕೆ ಹೋಗಿ ಟಿಕೆಟ್ ಹಣವನ್ನು ಸಂಗ್ರಹಿಸಿದ್ದಾರೆ. ಕುವೈಟ್ ನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿ ಯಲ್ಲಿ ತೊಡಗಿಸಿಕೊಂಡಿರುವ KKMA ಸಂಘಟಣೆಯು, ಕೋವಿಡ್ ಸಮಯದಲ್ಲಿ ಮರಣಹೊಂದಿದವರ ಮ್ರತದೇಹವನ್ನು ಊರಿಗೆ‌ ತಲುಪಿಸುವ, ಆಹಾರ ವ್ಯವಸ್ಥೆ ಇಲ್ಲದವರಿಗೆ ಆಹಾರ ಕಿಟ್ ಗಳನ್ನು ಒದಗಿಸುವುದು ಮತ್ತು ಸಂಕಷ್ಟಕ್ಕೆ ಒಳಗಾದ ಅನಿವಾಸಿ ಕನ್ನಡಿಗರನ್ನು ತಾಯಿನಾಡಿಗೆ ‌ತಲುಪಿಸಿವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News