ಇಟಲಿ ಮರೀನ್‌ಗಳು ಭಾರತೀಯ ಮೀನುಗಾರರನ್ನು ಹತ್ಯೆಗೈದ ಪ್ರಕರಣ

Update: 2020-07-03 17:45 GMT

ದ ಹೇಗ್ (ನೆದರ್‌ಲ್ಯಾಂಡ್ಸ್), ಜು. 3: 2012ರಲ್ಲಿ ಇಬ್ಬರು ಇಟಲಿ ನೌಕಾಪಡೆ ಸೈನಿಕರು ಇಬ್ಬರು ಭಾರತೀಯ ಮೀನುಗಾರರನ್ನು ಹತ್ಯೆಗೈದಿದ್ದಾರೆನ್ನಲಾದ ಪ್ರಕರಣದಲ್ಲಿ ನೆದರ್‌ಲ್ಯಾಂಡ್‌ನ ದ ಹೇಗ್ ನಗರದಲ್ಲಿರುವ ಖಾಯಂ ಪಂಚಾಯಿತಿ ನ್ಯಾಯಾಲಯವು, ಪ್ರಕರಣವನ್ನು ಭಾರತೀಯ ಅಧಿಕಾರಿಗಳು ನಿಭಾಯಿಸಿದ ರೀತಿಯನ್ನು ಎತ್ತಿಹಿಡಿದಿದೆ. ಅದೇ ವೇಳೆ, ಈ ಪ್ರಕರಣದಲ್ಲಿ ಪರಿಹಾರ ಪಡೆಯಲು ಭಾರತಕ್ಕೆ ಹಕ್ಕಿದೆ, ಆದರೆ ಇಟಲಿಯ ಮರೀನ್ ಸೈನಿಕರಿಗೆ ವಿಚಾರಣೆಯಿಂದ ಅಧಿಕೃತ ವಿನಾಯಿತಿ ಇರುವುದರಿಂದ ಅವರನ್ನು ಭಾರತ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ಹೇಳಿದೆ.

ಇಬ್ಬರು ಇಟಲಿ ಮರೀನ್‌ ಗಳು ಅಂತರ್‌ರಾಷ್ಟ್ರೀಯ ಕಾನೂನನ್ನು ಉಲ್ಲಂಸಿದ್ದಾರೆ, ಹಾಗಾಗಿ ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಡಂಬಡಿಕೆಯನ್ವಯ ಇಟಲಿಯು ಭಾರತದ ನೌಕಾಯಾನ ಸ್ವಾತಂತ್ರ್ಯವನ್ನು ಉಲ್ಲಂಸಿದಂತಾಗಿದೆ ಎಂಬುದಾಗಿಯೂ ಅಂತರ್‌ರಾಷ್ಟ್ರೀಯ ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.

2012 ಫೆಬ್ರವರಿಯಲ್ಲಿ, ಇಟಲಿಯ ತೈಲ ಟ್ಯಾಂಕರ್ ‘ಎಂವಿ ಎನ್ರಿಕಾ ಲೆಕ್ಸೀ’ಯಲ್ಲಿದ್ದ ಇಟಲಿಯ ಇಬ್ಬರು ನೌಕಾದಳ ಸೈನಿಕ (ಮರೀನ್)ರಾದ ಸಾಲ್ವಟೋರ್ ಗಿರೋನ್ ಮತ್ತು ಮಸಿಮಿಲಿಯನೊ ಲಾಟೋರ್, ಕೇರಳ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಯಲ್ಲಿದ್ದ ಇಬ್ಬರು ಭಾರತೀಯ ಮೀನುಗಾರರನ್ನು ಕೊಂದಿದ್ದಾರೆ ಹಾಗೂ ಆ ಸಂದರ್ಭದಲ್ಲಿ ಭಾರತೀಯ ಮೀನುಗಾರರು ಭಾರತದ ವಿಶೇಷ ಆರ್ಥಿಕ ವಲಯದಲ್ಲಿದ್ದರು ಎಂದು ಭಾರತ ಆರೋಪಿಸಿತ್ತು.

ಈ ಪ್ರಕರಣದಲ್ಲಿ ವ್ಯಾಪ್ತಿಯ ವಿಷಯವು ಎರಡು ದೇಶಗಳ ನಡುವೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಘಟನೆಯು ಭಾರತ ಜಲಪ್ರದೇಶದಲ್ಲಿ ನಡೆದಿದೆ ಹಾಗೂ ಮೃತ ಮೀನುಗಾರರು ಭಾರತೀಯರು, ಹಾಗಾಗಿ ಭಾರತದ ಕಾನೂನಿನಂತೆ ಪ್ರಕರಣದ ವಿಚಾರಣೆ ನಡೆಯಬೇಕು ಎಂಬುದಾಗಿ ಭಾರತ ಹೇಳಿತ್ತು. ಗುಂಡು ಹಾರಾಟವು ಭಾರತೀಯ ಜಲಪ್ರದೇಶದ ಹೊರಗೆ ಸಂಭವಿಸಿದೆ ಹಾಗೂ ತನ್ನ ಮರೀನ್‌ಗಳು ಇಟಲಿಯ ಹಡಗಿನಲ್ಲಿದ್ದರು ಎಂಬುದಾಗಿ ಇಟಲಿ ವಾದಿಸಿದೆ.

ಗುಂಡು ಹಾರಾಟ ನಡೆದ ಬಳಿಕ ಭಾರತವು ಇಬ್ಬರು ಇಟಲಿ ಮರೀನ್‌ಗಳನ್ನು ಬಂಧಿಸಿತ್ತು. ಆದರೆ, ಬಳಿಕ ಸುಪ್ರೀಂ ಕೋರ್ಟ್ ಆದೇಶದಂತೆ ವಿಶೇಷ ಶರತ್ತುಗಳಡಿ ಇಟಲಿಗೆ ಹಿಂದಿರುಗಲು ಅವರಿಗೆ ಅನುಮತಿ ನೀಡಲಾಗಿತ್ತು.

ಪ್ರಾಣಹಾನಿ, ದೈಹಿಕ ತೊಂದರೆ, ವಸ್ತು ಹಾನಿ ಮತ್ತು ಮೀನುಗಾರಿಕಾ ದೋಣಿ ‘ಸೇಂಟ್ ಆ್ಯಂಟನಿ’ಯ ಕ್ಯಾಪ್ಟನ್ ಮತ್ತು ಸಿಬ್ಬಂದಿ ಅನುಭವಿಸಿದ ಮಾನಸಿಕ ವೇದನೆಗಾಗಿ ಪರಿಹಾರ ಪಡೆಯುವ ಹಕ್ಕು ಭಾರತಕ್ಕಿದೆ ಎಂದು ನ್ಯಾಯಮಂಡಳಿ ತೀರ್ಮಾನಿಸಿದೆ.

ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳು ನಡೆದುಕೊಂಡ ರೀತಿ ಸರಿಯಾಗಿದೆ ಎಂದು ನ್ಯಾಯಮಂಡಳಿ ಹೇಳಿದೆ. ಇಡಲಿಯ ಸೇನಾ ಅಧಿಕಾರಿಗಳು ಹಾಗೂ ಆ ಮೂಲಕ ಇಟಲಿಯು ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಡಂಬಡಿಕೆಯಡಿ ಭಾರತದ ನೌಕಾಯಾನ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಎಂದು ಅದು ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News