ಕೊನೆಗೂ ಬಗೆಹರಿದ ಕುವೈತ್‌ನ ಕನ್ನಡಿಗರ ಸಮಸ್ಯೆ: ಜು.4ಕ್ಕೆ ಕುವೈತ್ ಕನ್ನಡಿಗರು ಮಂಗಳೂರಿಗೆ

Update: 2020-07-03 17:58 GMT

ಮಂಗಳೂರು: ಕೊರೋನ ಸೋಂಕು ಪರೀಕ್ಷೆ ಕಡ್ಡಾಯ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕುವೈತ್‌ನ ಕರಾವಳಿ ಕನ್ನಡಿಗರ ಸಮಸ್ಯೆ ಕೊನೆಗೂ ಬಗೆಹರಿದಿದೆ. ರಾಜ್ಯ ಸರಕಾರ ಕೋವಿಡ್ ಪರೀಕ್ಷೆ ಕಡ್ಡಾಯದಿಂದ ವಿನಾಯ್ತಿ ನೀಡಿದ ಕಾರಣ ಕುವೈತ್ ಕನ್ನಡಿಗರು ಜು.4ರಂದು ಮಂಗಳೂರಿಗೆ ಚಾರ್ಟರ್ಡ್ ವಿಮಾನದಲ್ಲಿ ಆಗಮಿಸಲಿದ್ದಾರೆ.

ಜೂ.26ರಂದು ಕುವೈತ್ ಕನ್ನಡಿಗರಿಗೆ ಮಂಗಳೂರಿಗೆ ಆಗಮಿಸಲು ಎಲ್ಲ ಸಿದ್ಧತೆ ನಡೆಸಲಾಗಿತ್ತು. ಕೊನೆಗಳಿಗೆಯಲ್ಲಿ ರಾಜ್ಯ ಸರಕಾರ ಅನುಮತಿ ನೀಡದೆ ಪ್ರಯಾಣ ರದ್ದುಪಡಿಸಬೇಕಾಯಿತು. ಸುಮಾರು 164 ಮಂದಿ ಕರಾವಳಿ ಕನ್ನಡಿಗರು ಮುಂಗಡ ಬುಕ್ಕಿಂಗ್ ಮಾಡಿದ್ದರು. ಊರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅಲ್ಲಿ ಬಾಡಿಗೆ ಮನೆ ಬಿಟ್ಟಿದ್ದ ಕನ್ನಡಿಗರು ಪರಿತಪಿಸುವಂತಾಗಿತ್ತು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅವರ ಅವಿರತ ಪ್ರಯತ್ನ ಹಾಗೂ ಕುವೈಟ್‌ನ ಇಂಜಿನಿಯರ್ ಮಂಜೇಶ್ವರ ಮೋಹನದಾಸ ಕಾಮತ್ ಅವರು ನೆರವಿನಿಂದ ಜು.4ಕ್ಕೆ ವಿಮಾನ ನಿಗದಿಯಾಗಿತ್ತು. ಆದರೆ ಇದೇ ವೇಳೆ ಗಲ್ಫ್ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಬರಬೇಕಾದರೆ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಸೂಚಿಸಿತ್ತು. ಇದರಿಂದಾಗಿ ಅವಕಾಶ ಇದ್ದರೂ ಬರಲಾಗದ ಪರಿಸ್ಥಿತಿ ಕನ್ನಡಿಗರಿಗೆ ಉಂಟಾಗಿತ್ತು.

ಕುವೈತ್‌ನಲ್ಲಿ ಇತರ ರಾಷ್ಟ್ರಗಳ ವಿಮಾನಯಾನಿಗಳಿಗೆ ಕೋವಿಡ್ ಟೆಸ್ಟ್‌ಗೆ ಸೌಲಭ್ಯ ಇಲ್ಲದಿರುವುದನ್ನು ಅಲ್ಲಿನ ಟ್ರಾವಲರ್ ಏಜೆನ್ಸಿ ರಾಯಭಾರ ಕಚೇರಿಗೆ ತಿಳಿಸಿತ್ತು. ಈ ಮಾಹಿತಿಯನ್ನು ರಾಜ್ಯ ಸರಕಾರಕ್ಕೆ ತಿಳಿಸಲಾಯಿತು. ಈ ವಿಚಾರದಲ್ಲಿ ಕ್ಯಾ.ಗಣೇಶ್ ಕಾರ್ಣಿಕ್ ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಇದರಲ್ಲಿ ಅಕ್ಬರ್ ಟ್ರಾವೆಲ್ಸ್ ಹಾಗೂ ಕೆಕೆಎಂಎ ಕರ್ನಾಟಕ ಶಾಖೆಯ ಸಹಕಾರವೂ ಸಾಕಷ್ಟಿದೆ. ಇದೀಗ ಕೇರಳದಂತೆ ಕರ್ನಾಟಕದಲ್ಲೂ ಕೊಲ್ಲಿ ರಾಷ್ಟ್ರದಿಂದ ಆಗಮಿಸುವ ಕನ್ನಡಿಗರಿಗೆ ಕೋವಿಡ್ ಟೆಸ್ಟ್‌ನಿಂದ ವಿನಾಯ್ತಿ ಸಿಕ್ಕಿದೆ.

ಜು.4ರಂದು ಬೆಳಗ್ಗೆ 11 ಗಂಟೆಗೆ ಕುವೈತ್‌ನಿಂದ ಇಂಡಿಗೋ ಚಾರ್ಟರ್ಡ್ ವಿಮಾನ 164 ಪ್ರಯಾಣಿಕರನ್ನು ಹೊತ್ತು ರಾತ್ರಿ 8:55ಕ್ಕೆ ಮಂಗಳೂರು ತಲುಪಲಿದೆ. ಬಳಿಕ ಪ್ರಯಾಣಿಕರನ್ನು ಮಂಗಳೂರಿನಲ್ಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ.

ಜು.8, 11 ಮತ್ತು 18ರಂದು ಕುವೈತ್‌ನಿಂದ ಕೇಂದ್ರ ಸರಕಾರದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ವಿಶೇಷ ವಿಮಾನಗಳು ಬೆಂಗಳೂರಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News