ದ.ಕ. ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

Update: 2020-07-03 18:07 GMT

ಮಂಗಳೂರು, ಜು.3: ದ.ಕ. ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಶುಕ್ರವಾರ ಮಧ್ಯಾಹ್ನದವರೆಗೆ ಬಿಡುವು ನೀಡಿದ್ದ ಮಳೆ ಬಳಿಕ ಬಿರುಸುಗೊಂಡಿದೆ. ಜಿಲ್ಲಾದ್ಯಂತ ಭಾರಿ ಮಳೆ ಸುರಿದಿದೆ.

ಬೆಳಗ್ಗೆ ಸ್ವಲ್ಪ ಮೋಡಕವಿದ ವಾತಾವರಣವಿತ್ತಾದರೂ, ಸಂಜೆಯಾಗುತ್ತಿದ್ದಂತೆ ಮಳೆಯ ತೀವ್ರತೆ ಹೆಚ್ಚಾಗಿದೆ. ಮಂಗಳೂರು ನಗರ, ಹೊರವಲಯ, ಬೆಳ್ತಂಗಡಿ, ಸುಬ್ರಹ್ಮಣ್ಯ, ಸುಳ್ಯ, ಬಂಟ್ವಾಳ, ವಿಟ್ಲ, ಮೂಡುಬಿದಿರೆ ಸೇರಿದಂತೆ ಜಿಲ್ಲಾದ್ಯಂತ ಮಳೆ ಸುರಿದಿದೆ. ಕೆಲವಡೆ ಗಾಳಿಯ ಅಬ್ಬರವೂ ಹೆಚ್ಚಿತ್ತು. ಹವಾಮಾನ ಇಲಾಖೆ ಕರಾವಳಿಗೆ ಆರೆಂಜ್ ಅಲರ್ಟ್ ಫೋಷಿಸಿದ್ದು, ಜುಲೈ 7ರ ವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

100 ಮಿಮಿ ಮಳೆ: ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 100.6 ಮಿ.ಮೀ. ಮಳೆ ಸುರಿದಿದೆ. ಮುಂಗಾರು ಆರಂಭದ ಬಳಿಕ ಜಿಲ್ಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾಗಿರುವುದು ಇದೇ ಮೊದಲು. ಬಂಟ್ವಾಳ ತಾಲೂಕಿನಲ್ಲಿ ಅತೀ ಹೆಚ್ಚು 136.4 ಮಿ.ಮೀ., ಬೆಳ್ತಂಗಡಿಯಲ್ಲಿ 93.6 ಮಿ.ಮಿ., ಮಂಗಳೂರಿನಲ್ಲಿ 118 ಮಿ.ಮೀ., ಪುತ್ತೂರಿನಲ್ಲಿ 82.4 ಮಿ.ಮೀ., ಸುಳ್ಯದಲ್ಲಿ 72.5 ಮಿ.ಮೀ. ಮಳೆ ಸುರಿದಿದೆ. ಬೆಳಗ್ಗಿನಿಂದ ಸಾಯಂಕಾಲದ ವರೆಗೆ ಜಿಲ್ಲೆಯ ಬಳ್ಕುಂಜೆ 59 ಮಿಮೀ, ಅಡ್ಯಾರ್‌ನಲ್ಲಿ 49 ಮಿಮೀ, ಕೊಕ್ಕಡದಲ್ಲಿ 45 ಮಿ.ಮೀ., ಮಿ.ಮೀ. ಮಳೆ ಸುರಿದಿದೆ.

ಕೈಗಾರಿಕಾ ಪ್ರದೇಶಕ್ಕೆ ನೀರು: ಗುರುವಾರ ದಿನವಿಡೀ ಸುರಿದ ಮಳೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೃತಕ ನೆರೆಯುಂಟಾಗಿದೆ. ಸುಮಾರು 6 ಯುನಿಟ್‌ಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಹಾದು ಹೋಗುವ ತೋಡಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ತಗ್ಗು ಪ್ರದೇಶದ ಕೈಗಾರಿಕಾ ಯುನಿಟ್‌ಗಳಿಗೆ ನೀರು ನುಗ್ಗಿದೆ. ತೋಡಿನ ಹೂಳು ತೆಗೆಯಲಾಗಿತ್ತಾದರೂ, ಮಳೆ ಹೆಚ್ಚಿದ್ದರಿಂದ ನೀರು ಪ್ರವಾಹೋಪಾದಿಯಲ್ಲಿ ಹರಿದು ಬಂದಿದೆ.

ಶುಕ್ರವಾರ ಸಾಯಂಕಾಲ ಸುರಿದ ಮಳೆಗೂ ತೋಡಿನಲ್ಲಿ ನೀರು ಹೆಚ್ಚಾದರೂ, ಕೈಗಾರಿಕೆಗಳಿಗೆ ಸಮಸ್ಯೆಯಾಗಿಲ್ಲ. ಬೈಕಂಪಾಡಿಯಲ್ಲಿ ಪ್ರತಿ ವರ್ಷ ಮಳೆಗೆ ಕೃತಕ ನೆರೆಯುಂಟಾಗುವುದು ಸಾಮಾನ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News