ಪಾಕ್: ಮಿನಿಬಸ್ ರೈಲಿಗೆ ಢಿಕ್ಕಿ: 19 ಸಿಖ್ ಯಾತ್ರಿಕರ ಸಾವು

Update: 2020-07-03 18:22 GMT

ಲಾಹೋರ್ (ಪಾಕಿಸ್ತಾನ), ಜು. 3: ಪಾಕಿಸ್ತಾನದ ಪಂಜಾಬ್ ರಾಜ್ಯದ ರೈಲ್ವೇ ಕ್ರಾಸಿಂಗ್ ಒಂದರಲ್ಲಿ ಶುಕ್ರವಾರ ಮಿನಿ ಬಸ್ಸೊಂದು ಪ್ರಯಾಣಿಕ ರೈಲೊಂದಕ್ಕೆ ಢಿಕ್ಕಿಯಾದಾಗ ಕನಿಷ್ಠ 19 ಪಾಕಿಸ್ತಾನಿ ಸಿಖ್ಖರು ಮೃತಪಟ್ಟಿದ್ದಾರೆ.

ಮೃತರ ಸಂಖ್ಯೆಯ ಬಗ್ಗೆ ವಿವಿಧ ವರದಿಗಳು ಬಂದಿವೆ. ಆದರೆ, ಮೃತರಲ್ಲಿ ಪೇಶಾವರದ 19 ಸಿಖ್ಖರು ಸೇರಿದ್ದಾರೆ ಎನ್ನುವುದನ್ನು ಪೊಲೀಸರು ಮತ್ತು ಇವೇಕ್ವೀ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ಖಚಿತಪಡಿಸಿವೆ.

ಪಂಜಾಬ್‌ನ ನಾನಖಾನ ಸಾಹಿಬ್‌ನಿಂದ ಹಿಂದಿರುಗುತ್ತಿದ್ದ ಸಿಖ್ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಕರಾಚಿಯಿಂದ ಲಾಹೋರ್‌ಗೆ ಬರುತ್ತಿದ್ದ ಶಾ ಹುಸೇನ್ ಎಕ್ಸ್‌ಪ್ರೆಸ್‌ಗೆ ಶೇಖುಪುರ ಜಿಲ್ಲೆಯ ಸಮೀಪದಲ್ಲಿರುವ ಕ್ರಾಸಿಂಗ್ ಒಂದರಲ್ಲಿ ಮಧ್ಯಾಹ್ನ ಸುಮಾರು 1:30ಕ್ಕೆ ಢಿಕ್ಕಿ ಹೊಡೆಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ಬಸ್‌ನಲ್ಲಿ ಸಿಖ್ ಯಾತ್ರಿಕರು ಶೇಖುಪುರ ಜಿಲ್ಲೆಯ ಫಾರೂಖಾಬಾದ್‌ನಲ್ಲಿರುವ ಗುರುದ್ವಾರ ಸಚ್ಚಾ ಸೌದಾಕ್ಕೆ ಪ್ರಯಾಣಿಸುತ್ತಿದ್ದರು. ಅವರು ಪೇಶಾವರದಿಂದ ನಾನಖಾನ ಸಾಹಿಬ್‌ಗೆ ಬಂದಿದ್ದರು. ನಾನಖಾನ ಸಾಹಿಬ್‌ನಲ್ಲಿ ತಂಗಿದ ಬಳಿಕ, ಅವರು ಪೇಶಾವರಕ್ಕೆ ಮರಳುತ್ತಿದ್ದರು. ಇಟಿಪಿಬಿ ಭದ್ರತಾ ಸಿಬ್ಬಂದಿ ನಾನಖಾನ ಸಾಹಿಬ್‌ನ ವ್ಯಾಪ್ತಿಯವರೆಗೆ ಅವರನ್ನು ಕರೆದುಕೊಂಡು ಹೋಗಿದ್ದರು’’ ಎಂದು ಇಟಿಪಿಬಿ ವಕ್ತಾರ ಅಮೀರ್ ಹಾಶ್ಮಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

‘‘ಕ್ರಾಸಿಂಗ್‌ನ ಗೇಟ್ ಮುಚ್ಚಿತ್ತು. ಗೇಟ್ ತೆರೆಯುವವರೆಗೆ ಕಾಯುವ ಬದಲು ಮಿನಿಬಸ್‌ನ ಚಾಲಕನು ಅಡ್ಡರಸ್ತೆಯಲ್ಲಿ ಬಸ್ಸನ್ನು ಒಯ್ಯಲು ಯತ್ನಿಸಿದನು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News