ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕ್ವಾರಂಟೈನ್ ಉಲ್ಲಂಘನೆ ಪ್ರಕರಣ: ಜಿಪಿಎಸ್ ಆಧರಿಸಿ 51 ಕೇಸ್ ದಾಖಲು

Update: 2020-07-04 06:04 GMT
ಸಾಂದರ್ಭಿಕ ಚಿತ್ರ

ಬಂಟ್ವಾಳ, ಜು.3: ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ‌ ದಿನಕ್ಕೆ ಭಾರೀ‌ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಿರುಗಾಟ ನಡೆಸುವ ಪ್ರಕರಣಗಳೂ ಹೆಚ್ಚುತ್ತಿದೆ. 

ದ.ಕ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಟ ನಡೆಸಿದ 51 ಪ್ರಕರಣಗಳು ಬೆಳಕಿಗೆ ಬಂದಿದ್ದು ಅವರ ಮೇಲೆ ಪ್ರಕರಣ ದಾಖಲಿಸಲು ಜಿಲ್ಲಾಡಳಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೂಲಕ ಅಯಾಯ ಪೊಲೀಸ್ ಠಾಣೆಗಳಿಗೆ ಸೂಚಿಸಿದೆ. 

ಹೋಂ ಕ್ವಾರಂಟೈನ್ ನಲ್ಲಿರುವವರ ಮೇಲೆ ಮೊಬೈಲ್ ಆ್ಯಪ್ ಆಶ್ರಯಿತ ಜಿಪಿಆರ್ ಆಧಾರಿತ ತಂತ್ರಜ್ಞಾನ ಮೂಲಕ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಕೋವಿಡ್ - 19 ವಾರ್ ರೂಂನಲ್ಲಿ ನಿಗಾ ಇಡಲಾಗುತ್ತಿದೆ. ಇತ್ತೀಚೆಗೆ ವಾರ್ ರೂಂ ಅಧಿಕಾರಿಗಳು ಜಿಲ್ಲಾಡಳಿತದ ಜೊತೆ ನಡೆಸಿದ ವೀಡಿಯೊ ಸಂವಾದದಲ್ಲಿ ನೀಡಿರುವ ನಿರ್ದೇಶನದಂತೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಭಾರೀ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸರಿಗೆ ಅದೇಶ ಮಾಡಲಾಗಿದೆ. ಅದರಂತೆ ನಿಯಮ ಉಲ್ಲಂಘಿಸಿದವರ ಮೇಲೆ 269, 270,271 ಐಪಿಸಿ, ಹಾಗೂ ಕರ್ನಾಟಕ ಎಪಿಡಮಿಕ್ ಆಕ್ಟ್ 5(1) ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದೆ. 

ಕ್ವಾರಂಟೈನ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾದರೆ, ಬಂಟ್ವಾಳ ನಗರ ಠಾಣೆಯಲ್ಲಿ 1, ವಿಟ್ಲ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News