ರವಿವಾರ ದ.ಕ.ಜಿಲ್ಲೆಯಲ್ಲಿ ಲಾಕ್‌ಡೌನ್

Update: 2020-07-04 12:50 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜು.4: ರಾಜ್ಯ ಸರಕಾರದ ಆದೇಶದಂತೆ ಜು.5ರಂದು ರಾಜ್ಯಾದ್ಯಂತ ಲಾಕ್‌ಡೌನ್ ಆಗಲಿದ್ದು, ಜಿಲ್ಲೆಯ ಜನರೂ ಕೂಡ ಮಾನಸಿಕವಾಗಿ ಸಿದ್ಧತೆ ನಡೆಸಿದ್ದಾರೆ.

ರವಿವಾರ ದ.ಕ.ಜಿಲ್ಲೆಯಲ್ಲಿ ಯಾವುದೇ ಖಾಸಗಿ ಬಸ್ ಸಂಚಾರ ಇಲ್ಲ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣವು ಸಮಾಜಕ್ಕೆ ಹಬ್ಬಿದೆ. ಆ ಹಿನ್ನೆಲೆಯಲ್ಲಿ ಜನರೇ ಸ್ವಯಂ ನಿರ್ಬಂಧ ಹೇರುತ್ತಿದ್ದಾರೆ. ಅದರಂತೆ ಶುಕ್ರವಾರದಿಂದ ಪ್ರಯಾಣಿಕರೇ ಇಲ್ಲ. ಕೆಲವು ರೂಟಿನ ಬಸ್‌ಗಳಲ್ಲಿ ಎಲ್ಲಾ ಖರ್ಚು ಕಳೆದು 50-75 ರೂ. ಉಳಿಕೆಯಾದದ್ದಿದೆ. ಹಾಗಾಗಿ ಬಸ್‌ಗಳ ಓಡಾಟ ಕಷ್ಟವಾಗುತ್ತಿದೆ ಎಂದು ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ. ಈ ಮಧ್ಯೆ ಸರಕಾರವೇ ರವಿವಾರ ಲಾಕ್‌ಡೌನ್ ಘೋಷಿಸಿರುವುದು ಬಸ್ ಮಾಲಕರಿಗೆ ತುಸು ನೆಮ್ಮದಿಯನ್ನು ನೀಡಿವೆ.

ರವಿವಾರ ಅಗತ್ಯ ವಸ್ತುಗಳ ಸಾಗಾಟ ವಾಹನ, ತರಕಾರಿ, ಹಣ್ಣು ಹಂಪಲು, ಮೀನು-ಮಾಂಸ ಮಾರಾಟ, ಆ್ಯಂಬುಲೆನ್ಸ್ ಓಡಾಟ, ಆಸ್ಪತ್ರೆ-ಕ್ಲಿನಿಕ್‌ಗಳು, ಔಷಧ ಮಳಿಗೆಗಳನ್ನು ತೆರೆಯಲು ಅವಕಾಶವಿದೆ. ತುರ್ತು ವಾಹನ ಹೊರತುಪಡಿಸಿ ಬಸ್, ರಿಕ್ಷಾ, ಕ್ಯಾಬ್, ಟ್ಯಾಕ್ಸಿ, ಮಾಲ್, ಮದ್ಯದ ಅಂಗಡಿ ತೆರೆಯಲು ಅವಕಾಶವಿಲ್ಲ. ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದರೂ ಕೂಡ ಜನರು ಮನೆಯಿಂದ ಹೊರಗಿಳಿಯುವ ಸಾಧ್ಯತೆ ಇಲ್ಲದ್ದರಿಂದ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯಲು ಹಿಂದೇಟು ಹಾಕಿದ್ದಾರೆ.

ಜಿಲ್ಲೆಯ ಬಹುತೇಕ ಕಡೆ ಮಧ್ಯಾಹ್ನ ಅಥವಾ ಸಂಜೆಯ ಬಳಿಕ ಅಂಗಡಿಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News