ಚುರುಕುಗೊಂಡ ಮುಂಗಾರು: ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಳ

Update: 2020-07-04 14:38 GMT

ಬಂಟ್ವಾಳ, ಜು.4: ಎರಡು ದಿನಗಳಿಂದ ಬಂಟ್ವಾಳ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಪರಿಣಾಮ ಶನಿವಾರ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ತಾಲೂಕಿನ ವಿವಿಧೆಡೆ ಗುಡ್ಡ - ತಡೆಗೋಡೆ ಕುಸಿತ, ಕೃತಕ ನೆರೆ, ಮರ, ವಿದ್ಯುತ್ ಕಂಬಗಳು ಧರೆಗೆ ಉರುಳಿದ ಘಟನೆಗಳು ನಡೆದಿವೆ.  

ನೇತ್ರಾವತಿ ನದಿನೀರಿನ ಮಟ್ಟ ಶುಕ್ರವಾರ 3.6 ಮೀಟರ್ ಇತ್ತು. ಇಂದು 3.8 ಮೀಟರ್ ಆಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ತುಂಬೆ ಡ್ಯಾಂನಲ್ಲಿ30 ಗೇಟ್ ಗಳ ಪೈಕಿ 11 ಗೇಟ್‌ಗಳನ್ನು ತೆರೆಯಲಾಗಿದೆ. ಮಳೆ ಮತ್ತಷ್ಟು ಬಿರುಸುಗೊಂಡರೆ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಲಿದೆ. ಬಂಟ್ವಾಳದಲ್ಲಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದೆ. 

ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ತಾಲೂಕಿನ ಸಜಿಪನಡು ಗ್ರಾಮದ‌ ಬೈಲಗುತ್ತುವಿನ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆಯಿಂದಾಗಿ ಹಲವು ಮನೆಗಳ‌ ಸುತ್ತ ಜಲಾವೃತಗೊಂಡಿದೆ. ಕೆಲವು ಮನೆಯ ಒಳಗೂ ನೀರು ನುಗ್ಗಿದೆ. ಇದು ಹಲವು ವರ್ಷಗಳಿಂದ ಇರುವ ಸಮಸ್ಯೆಯಾಗಿದ್ದು ಬೈಲಗುತ್ತಿನಲ್ಲಿ ಹಾದು ಹೋಗಿರುವ ತೋಡೊಂದರಲ್ಲಿ ಹರಿಯುವ ಮಳೆ ನೀರಿನಿಂದ ಈ ಸಮಸ್ಯೆ ಉಂಟಾಗುತ್ತಿದೆ. ಸಾಧಾರಣ ಮಳೆಯಾದರೂ ಈ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಲಿದೆ. ಈ ತೋಡಿಗೆ ತಡೆಗೋಡೆ ನಿರ್ಮಿಸಿದಲ್ಲಿ ಸಮಸ್ಯೆ ಪರಿಹಾರ ಕಾಣಲಿದೆ. 

ಕರಿಯಂಗಳ ಗ್ರಾಮದ ಬಡಕಬೈಲ್ ಗಾಣೆಮಾರ್ ಎಂಬಲ್ಲಿ ಪೂರ್ಣೇಶ್ವರಿ ಎಂಬವರ ಮನೆಯ ಆವರಣ ಗೋಡೆಗೆ ಗುಡ್ಡ ಜರಿದು ಮನೆಗೆ ಬಿದ್ದಿದ್ದಲ್ಲದೆ ಗುಡ್ಡದ ಮೇಲ್ಗಡೆ ಇರುವ ಚಂದಪ್ಪ ಮುಖಾರಿ ಎಂಬವರ ಮನೆ ಸಹಿತ ಹಲವು ಮನೆಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ ಎಂದು ಪಂಚಾಯತ್ ಅಧಿಕಾರಿಗೆ ದೂರು ನೀಡಲಾಗಿದೆ.

ಬಡಕಬೈಲ್ ನ ತೋಡೊಂದರಲ್ಲಿ ಮಣ್ಣು ತುಂಬಿ, ಮಳೆ ನೀರು ಉಕ್ಕಿ ಪಕ್ಕದ ಗದ್ದೆಗಳಿಗೆ ನುಗ್ಗಿದೆ. ಮಣಿಕಂಠಪುರದ ಕಾಂಕ್ರೀಟ್ ರಸ್ತೆಗೆ ಗುಡ್ಡ ಕುಸಿದು ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕೆಲವೆಡೆ ಗುಡ್ಡದ ಮರಗಳು ತುಂಡಾಗಿ ರಸ್ತೆಗೆ ಬಿದ್ದಿವೆ. ವಿದ್ಯುತ್ ಕಂಬ ತುಂಡಾಗಿ ಮರದ ಮೇಲೆ ಬಿದ್ದಿರುವ ಘಟನೆಗಳು ನಡೆದಿದೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News