ರವಿವಾರ ಉಡುಪಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-07-04 13:47 GMT

ಉಡುಪಿ, ಜು.4: ಸರಕಾರದ ಆದೇಶದಂತೆ ಜು.5ರಿಂದ ಪ್ರಾರಂಭಿಸಿ ಆ.2ರ ವರೆಗೆ ಪ್ರತಿ ರವಿವಾರ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತಿದ್ದು, ಉಡುಪಿ ಜಿಲ್ಲೆಯಲ್ಲೂ ಇದನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಆದರೆ ಅಗತ್ಯ ಸರಕು, ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಅವುಗಳನ್ನು ಲೋಡ್-ಅನ್‌ಲೋಡ್ ಮಾಡಲು ಅವಕಾಶವಿದೆ. ನಾಳೆ ಜಿಲ್ಲೆಯಲ್ಲಿ ಎಲ್ಲಾ ಮೆಡಿಕಲ್ ಶಾಪ್‌ಗಳು, ಕ್ಲಿನಿಕ್‌ಗಳು, ಆಸ್ಪತ್ರೆಗಳು ತೆರೆದಿರುತ್ತವೆ. ಹಾಲು-ಪೇಪರ್‌ಗಳೂ ಸಿಗುತ್ತವೆ. ಉಳಿದಂತೆ ಯಾವುದೇ ವಸ್ತುಗಳು ಸಿಗುವುದಿಲ್ಲ. ಅವುಗಳನ್ನು ಹಿಂದಿನ ದಿನವೇ ಖರೀದಿಸಿಟ್ಟಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಸರಕಾರದ ಆದೇಶದಲ್ಲಿ ತಿಳಿಸಿರುವಂತೆ ಮೊದಲೇ ನಿಗದಿಯಾದ ವಿವಾಹಗಳಿದ್ದರೆ, ಗರಿಷ್ಠ 50 ಜನರಿಗೆ ನಿರ್ಬಂಧ ವಿಧಿಸಲಾಗಿದೆ. ಅದರಂತೆ ತಹಶೀಲ್ದಾರ್‌ರ ಅನುಮತಿಯನ್ನು ಪಡೆದು ವಿವಾಹ ಸಮಾರಂಭವನ್ನು ನಡೆಸಬಹುದು. ಅದು ಬಿಟ್ಟು ಉಳಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದವರು ತಿಳಿಸಿದ್ದಾರೆ.

ಯಾರೇ ಆದರೂ, ಏನೂ ಕೆಲಸವಿಲ್ಲದೇ ಅನಗತ್ಯವಾಗಿ ತಿರುಗಿದರೆ, ಅವರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೇ, ಅಂಥವರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತೇವೆ. ಆದುದರಿಂದ ಸರಕಾರದ ಆದೇಶವನ್ನು ಯಾರೂ ಸಹ ಉಲ್ಲಂಘಿಸದಂತೆ ತಿಳಿಸಿರುವ ಜಿ.ಜಗದೀಶ್, ಈಗಾಗಲೇ ಜಿಲ್ಲೆಯಾದ್ಯಂತ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News