ಮುನಿಯಾಲು ಆಯುರ್ವೇದದಿಂದ ಔಷಧೀಯ ಸಸ್ಯಗಳ ಉಚಿತ ವಿತರಣೆ
Update: 2020-07-04 19:25 IST
ಉಡುಪಿ, ಜು.4: ವನಮಹೋತ್ಸವ ಸಪ್ತಾಹದ ಅಂಗವಾಗಿ ಪ್ರತಿ ವರ್ಷದಂತೆ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಆಸಕ್ತ ಸಾರ್ವಜನಿಕರಿಗೆ ವಿವಿಧ ಜಾತಿಯ ರೋಗ ನಿರೋಧಕ ಔಷಧೀಯ ಗುಣಗಳುಳ್ಳ ಮರ, ಗಿಡ, ಬಳ್ಳಿಗಳ ಸಸಿಳನ್ನು ಉಚಿತವಾಗಿ ನೀಡಲಾಗುತ್ತದೆ.
ಇದೇ ಜು.6ರ ಸೋಮವಾರ ಇವುಗಳ ವಿತರಣೆ ನಡೆಯಲಿದೆ. ಕೋವಿಡ್- 19ರ ಪ್ರಯುಕ್ತ ಮಾಸ್ಕ್ ಧರಿಸಿಕೊಂಡು, ಸುರಕ್ಷಿತಾ ಅಂತರ ಕಾಯ್ದುಕೊಂಡು ಇವುಗಳನ್ನು ವಿತರಿಸಲಾಗುತ್ತದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟನೆ ತಿಳಿಸಿದೆ. ಬೆಳಗ್ಗೆ 9:00ರಿಂದ ಸಂಜೆ 4:00ರವರೆಗೆ ಉಚಿತವಾಗಿ ಮರಗಳಾದ ಪೇರಳೆ, ಬಿಲ್ವಪತ್ರೆ, ಕಹಿಬೇವು, ನೆಲ್ಲಿ, ಕಾಡು ಬಾದಾಮಿ, ಪುನರ್ಪುಳಿ, ಹೊಂಗೆ, ನೇರಳೆ, ನೊರೆಕಾಯಿ, ಹಾಗೂ ಬಳ್ಳಿ ಮತ್ತು ಗಿಡಗಳಾದ ಅಮೃತ ಬಳ್ಳಿ, ಸಂಧಿಬೀಳು, ಕಾಳುಮೆಣಸು ಮತ್ತು ಇತರ ಸಸಿಗಳನ್ನು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.