ಉಡುಪಿ ನಗರ ಹಲವು ಕಡೆ ಜಲಾವೃತ: ವಸತಿ ಸಮುಚ್ಛಯ, ಮನೆಗಳಿಗೆ ನುಗ್ಗಿದ ನೀರು

Update: 2020-07-04 14:06 GMT

ಉಡುಪಿ, ಜು.4: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಕಲ್ಸಂಕ ತೋಡು ತುಂಬಿ ಹರಿಯುತ್ತಿದ್ದು, ಇದರಿಂದ ಸುತ್ತಮುತ್ತಲಿನ ಪರಿಸರ ಜಲಾವೃತಗೊಂಡಿದೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶ ಮಳೆ ನೀರಿ ನಿಂದ ತುಂಬಿ ಹೋಗಿ ವಾಹನ ನಿಲುಗಡೆಗೆ ಅಡಚಣೆಯಾಗಿದೆ. ಅದೇ ರೀತಿ ಅಲ್ಲೇ ಸಮೀಪದ ಬೈಲಕೆರೆಯ ಗೋಪಾಲ ಎಂಬವರ ಮನೆ ನೀರಿನಿಂದ ಆವೃತ ಗೊಂಡಿದ್ದು, ಮನೆಯ ಅಂಗಳದಲ್ಲಿ ಮೊಣಕಾಲಿನವರೆಗೆ ನೀರು ನಿಂತಿರುವುದು ಕಂಡುಬಂದಿದೆ.

‘ಪ್ರತಿವರ್ಷ ಜೋರು ಮಳೆ ಬಂದರೆ ಈ ರೀತಿ ನೆರೆ ಬರುತ್ತದೆ. ಒಮ್ಮಮ್ಮೆ ಮನೆಯ ಒಳಗೂ ನೀರು ನುಗ್ಗುತ್ತದೆ. ಜು.3ರ ಸಂಜೆಯಿಂದ ತೋಡು ಉಕ್ಕಿ ಹರಿದು ನಮ್ಮ ಮನೆಯ ಅಂಗಳ ಜಲಾವೃತಗೊಂಡಿದೆ’ ಎಂದು ಸ್ಥಳೀಯ ಮನೆಯ ಗೋಪಾಲ ತಿಳಿಸಿದ್ದಾರೆ.

ಅಲ್ಲದೇ ಬೈಲಕೆರೆಯ ವಸತಿಗೃಹವೊಂದರ ಪಾರ್ಕಿಂಗ್ ಏರಿಯಾಕ್ಕೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಬನ್ನಂಜೆಯ ಮೂಡನಿಡಂಬೂರು ಎಂಬಲ್ಲಿ ರಸ್ತೆ ಹಾಗೂ ಕೆಲವು ಮನೆಗಳು ಜಲಾವೃತಗೊಂಡಿವೆ. ಜನ ತಮ್ಮ ತಮ್ಮ ಮನೆಗಳಿಗೆ ತೆರಳಲು ತೊಂದರೆ ಅನುಭವಿಸಿದರು. ಅದೇ ರೀತಿ ಉಡುಪಿ ಹೊರವಲಯದ ಹಲವು ತಗ್ಗು ಪ್ರದೇಶಗಳಲ್ಲಿಯೂ ಕೃತಕ ನೆರೆ ಉಂಟಾಗಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News