ಕಾಪುವಿನಲ್ಲಿ ಭಾರೀ ಮಳೆ: ನಡಿಪಟ್ಣದಲ್ಲಿ ಕಡಲ್ಕೊರೆತ

Update: 2020-07-04 16:29 GMT

ಕಾಪು, ಜು.4: ಕಾಪು ತಾಲೂಕಿನಾದ್ಯಂತ ಶನಿವಾರ ಭಾರಿ ಮಳೆಯಾಗುತಿದ್ದು, ತಾಲೂಕಿನ ಅನೇಕ ಕಡೆಗಳಲ್ಲಿ ನೆರೆ ಭೀತಿ ಉಂಟಾಗಿದೆ. ಪಡುಬಿದ್ರಿ ಬಳಿಯ ನಡಿಪಟ್ಣದಲ್ಲಿ ಕಡಲು ಕೊರೆತ ಪ್ರಾರಂಭಗೊಂಡಿದೆ.

ಭಾರೀ ಮಳೆಯಿಂದ ಕಾಪು ಪುರಸಭಾ ವ್ಯಾಪ್ತಿಯ ಬೆಳಪು-ಮಲ್ಲಾರು ರಸ್ತೆಯಲ್ಲಿ ಕೃತಕ ನೆರೆ ಭೀತಿ ಉಂಟಾಗಿದೆ. ಕಾಪುವಿನ ಕೊಪ್ಪಲಂಗಡಿಯಲ್ಲಿ ಶುಕ್ರವಾರ ರಾತ್ರಿ ಬೀಸಿದ ಗಾಳಿಗೆ ಮರವೊಂದು ಮನೆ ಮೇಲೆ ಬಿದ್ದಿದ್ದು, ಅಪಾರ ನಷ್ಟು ಉಂಟಾಗಿದೆ.

ಪರಿಸರದಲ್ಲಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲದ ಕಾರಣ ಕೃತಕ ನೆರೆ ಉಂಟಾಗಿದ್ದು, ಬೆಳಪು, ಮಲ್ಲಾರು ಪರಿಸರದ 40ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ಅವುಗಳಿಗೆ ಸಂಪರ್ಕ ಕಡಿತದ ಭೀತಿ ಎದುರಾ ಗಿದೆ. ಪ್ರತೀ ಮಳೆಗಾಲದಲ್ಲೂ ನೆರೆ ಬಂದಾಗ ರಸ್ತೆಯಲ್ಲೇ ನೀರು ಹರಿದು ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು, ರಸ್ತೆಯನ್ನು ಸೇತುವೆಯ ಮಟ್ಟಕ್ಜೆ ಏರಿಸಿ ನೀರಿನ ಸರಾಗ ಹರಿವಿಕೆಗೆ ವ್ಯವಸ್ಥೆ ಮಾಡಿದಲ್ಲಿ ಕೃತಕ ನೆರೆ ಸಮಸ್ಯೆಯನ್ನು ತಪ್ಪಿಸಬಹುದು. ಈ ಬಾರಿ ಕಾಪು ಪುರಸಭೆಯ ವತಿಯಿಂದ ತೋಡಿನ ಹೂಳೆತ್ತಿರುವುದರಿಂದ ಸ್ವಲ್ಪಮಟ್ಟಿಗೆ ಅನುಕೂಲವಾಗಿದೆ ಎನ್ನುತ್ತಾರೆ ಸ್ಥಳೀಯರು.

ಇಲ್ಲಿನ ನಡಿಪಟ್ಣ ಮಹೇಶ್ವರೀ ಫಂಡ್ ಚಪ್ಪರದ ಬಳಿ ಶನಿವಾರ ಕಡಲ್ಕೊರೆತ ಕಾಣಿಸಿಕೊಂಡಿದೆ. ಇದರಿಂದ ನಡಿಪಟ್ಣ ಹರೀಶ್ ಪುತ್ರನ್ ಮನೆ ಬಳಿ ಸಮುದ್ರ ತಡೆಗೋಡೆ ಹಾಗು ಕೆಲವು ಮರಗಳು ಸಮುದ್ರ ಪಾಲಾಗಿವೆ. ತಡೆಗೋಡೆಯ ಅಡಿಭಾಗವನ್ನು ನೀರು ಸೆಳೆದಿದ್ದು, ಇದರಿಂದ ತಡೆಗೋಡೆಗೆ ಹಾನಿಯಾಗಿದೆ. ಇದರೊಂದಿಗೆ ಹಲವು ಮರಗಿಡಗಳು ಸಹ ಸಮುದ್ರ ಪಾಲಾಗಿದೆ. ಸ್ಥಳೀಯ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ ಸ್ಥಳಕ್ಕೆ ಆಗಮಿಸಿ ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ತಡೆಗೋಡೆ ದುರಸ್ಥಿ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ.

ಮೂಳೂರು ಹಾಗೂ ಉಚ್ಚಿಲ ಬಡಾ ಮೀನುಗಾರಿಕಾ ರಸ್ತೆಯಲ್ಲೂ ಕೃತಕ ನೆರೆ ಉಂಟಾಗಿದೆ. ಎರ್ಮಾಳು ಬಡಾ ತಗ್ಗು ಪ್ರದೇಶ ಜಲಾವೃತಗೊಂಡಿದೆ. ಮೀನುಗಾರಿಕಾ ರಸ್ತೆಗಳು ಕೃತಕ ನೆರೆಯಿಂದ ಜಲಾವೃತವಾಗಿದೆ.

ಪಡುಬಿದ್ರಿಯ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ನೀರು ನಿಂತು ನೆರೆ ಉಂಟಾಗಿ ಜಲಾವೃತಗೊಂಡಿದೆ. ಪಡುಬಿದ್ರಿ, ಫಲಿಮಾರು, ನಂದಿಕೂರು, ಅವರಾಲುಮಟ್ಟು, ಎರ್ಮಾಳು-ಅದಮಾರು ರಸ್ತೆ, ಮುದರಂಗಡಿ, ಮೂಳೂರು, ಕಾಪು ಪರಿಸರದ ತಗ್ಗು ಪ್ರದೇಶಗಳಲ್ಲೂ ಭಾರೀ ಮಳೆಯಿಂದ ನೆರೆ ಭೀತಿ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News