ನವಯುಗ ರಸ್ತೆ ಕಾಮಗಾರಿ ಅವಾಂತರ: ಉಚ್ಚಿಲದಲ್ಲಿ ಕೃತಕ ನೆರೆ

Update: 2020-07-04 16:33 GMT

ಪಡುಬಿದ್ರೆ, ಜು.4: ಪಡುಬಿದ್ರೆ ಹಾಗೂ ಉಚ್ಚಿಲದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸಿದ ನವಯುಗ ಕಂಪೆನಿ ಅಲ್ಲಲ್ಲಿ ನಡೆಸಿದ ಅಸಮರ್ಪಕ ಕಾಮಗಾರಿಯ ಕಾರಣದಿಂದ, ಶನಿವಾರ ಬೆಳಗಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದೆ.
ಶನಿವಾರದ ಮಳೆಗೆ ಪಡುಬಿದ್ರಿ ಪೇಟೆ ಹಾಗೂ ಹೆದ್ದಾರಿಯ ಪೂರ್ವ ಭಾಗಗಳಿಂದ ಮಳೆ ನೀರು ಕೆಳಗಿನ ಪೇಟೆಯತ್ತ ನುಗ್ಗುತ್ತಿದೆ. ಪಡುಬಿದ್ರಿ ದೇವಳ, ಕೆಳಗಿನ ಪೇಟೆಯಲ್ಲಿ ಶೋಭಾ ರಾವ್, ನಾತು ಪೂಜಾರಿ, ಶ್ರೀಕಾಂತ ಶೆಣೈ ಮತ್ತಿತರರ ಮನೆಗಳಿಗೆ ನುಗ್ಗುತ್ತಿವೆ. ಅದೇ ರೀತಿ ಕೆಳಗಿನ ಪೇಟೆಯ ಕಾರ್ಪೊರೇಷನ್ ಬ್ಯಾಂಕ್ ಹಾಗೂ ಇದರ ಪಕ್ಕದ ವ್ಯವಹಾರ ಮಳಿಗೆಗಳಿಗೂ ಮಳೆ ನೀರು ನುಗ್ಗಿದೆ.

ಪಡುಬಿದ್ರಿಯ ಹಳೆ ಎಂಬಿಸಿ ರಸ್ತೆಯ ಹೊಟೇಲ್ ಅಮರ್ ಕಂಫರ್ಟ್ಸ್ ವರೆಗೆ ಕಾಮಗಾರಿ ನಡೆಸಿ ನಿಲ್ಲಿಸಲಾಗಿದೆ. ಇಲ್ಲಿ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದು ಸಮಸ್ಯೆ ಆಗುತ್ತಿದೆ.

ಉಚ್ಚಿಲದಲ್ಲೂ ಇದೇ ಸಮಸ್ಯೆ: ಉಚ್ಚಿಲ ಪೇಟೆಯಲ್ಲೂ ಇದೇ ಸ್ಥಿತಿ ಇದೆ. ಇಲ್ಲೂ ಒಳಚರಂಡಿ ಕಾಮಗಾರಿ ನಡೆಸದೆ ಇರುವುದರಿಂದ ಸಮಸ್ಯೆ ಉಂಟಾಗಿದೆ. ಶನಿವಾರ ಸುರಿದ ಮಳೆಗೆ ಮಹಾಲಿಂಗೇಶ್ವರ ದೇವಸ್ಥಾನದ ಸ್ವಾಗತ ಗೋಪುರ ಬಳಿ ನೀರು ನಿಂತು ರಸ್ತೆಯಲ್ಲಿಯೇ ನೀರು ನಿಂತಿದೆ. ಇಲ್ಲಿನ ಪ್ರಕಾಶ್ ದೇವಾಡಿಗರ ಮನೆ ಹಾಗು ತೋಟ ಸಂಪೂರ್ಣ ಜಲಾವೃತಗೊಂಡಿದೆ.

ಮನೆಯ ಸುತ್ತಲೂ ಎರಡು ಮೂರು ಅಡಿ ನೀರು ತುಂಬಿದ್ದು, ಮನೆಯಿಂದ ಹೊರಬಾರದ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಬಾವಿ ಸಂಪೂರ್ಣ ಕೊಳಚೆಯುಕ್ತ ನೀರಿನಿಂದ ತುಂಬಿದ್ದು, ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News