ಅತಿಥಿ ಶಿಕ್ಷಕರಿಗೆ ಯೋಜನೆ ಪ್ರಕಟಿಸಿ: ಸರಕಾರಕ್ಕೆ ಕ್ಯಾಂಪಸ್ ಫ್ರಂಟ್ ಆಗ್ರಹ

Update: 2020-07-04 16:54 GMT

ಮಂಗಳೂರು, ಜು.4: ದೇಶಾದ್ಯಂತ ಲಾಕ್‌ಡೌನ್ ಹೇರಿಕೆಯಿಂದಾಗಿ ಜನ ಜೀವನ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಇದರ ಪರಿಣಾಮವು ಈಗ ಖಾಸಗಿ ಶಾಲಾ ಕಾಲೇಜಿನ ಶಿಕ್ಷಕರಿಗೆ ಮತ್ತು ಸರಕಾರಿ ಅತಿಥಿ ಉಪನ್ಯಾಸಕರ ಮೇಲೆ ಕೂಡ ಬೀರಿದೆ. ಇವರಿಗೆ ಕೂಡಲೇ ರಾಜ್ಯ ಸರಕಾರ ಯೋಜನೆ ಪ್ರಕಟಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.

ರಾಜ್ಯದಲ್ಲಿ ಸುಮಾರು 23 ಸಾವಿರಕ್ಕೂ ಹೆಚ್ಚು ಖಾಸಗಿ ಶಿಕ್ಷಕರ ಭವಿಷ್ಯವು ಆತಂಕದಲ್ಲಿದೆ. ಸರಕಾರಿ ಅತಿಥಿ ಉಪನ್ಯಾಸಕರು ವೇತನವಿಲ್ಲದೇ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರ ಶೀಘ್ರದಲ್ಲೇ ಯೋಜನೆಗಳನ್ನು ಪ್ರಕಟಿಸಿ ನೆರವಾಗಲು ಕ್ಯಾಂಪಸ್ ಫ್ರಂಟ್ ಒತ್ತಾಯಿಸಿತು.

ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಶೈಕ್ಷಣಿಕ ವರ್ಷ ಕೊನೆಯಾಗುತ್ತಿರುವ ವೇಳೆ ಸಂಸ್ಥೆಗಳು ಅತಿಥಿ ಶಿಕ್ಷಕರ ಮೇಲೆ ಎಲ್ಲ ಒತ್ತಡ ಹಾಕಿ ಪಾಠ ಮುಗಿಸುತ್ತಾರೆ, ಇಂತಹ ಸಂದರ್ಭ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ವೇತನ ಬಾಕಿ ಇಟ್ಟರೆ ಅವರ ಪಾಡೇನು ಎಂದು ಫ್ರಂಟ್ ಪ್ರಶ್ನಿಸಿದೆ.

ರಾಜ್ಯದಲ್ಲಿ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸೇರಿ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರ ಸಂಖ್ಯೆ 34,516 ಇದೆ. ಶೇ.70ರಷ್ಟು ಇರುವ ಅತಿಥಿ ಉಪನ್ಯಾಸಕರಿಂದಲೇ ಶೈಕ್ಷಣಿಕ ವರ್ಷದ ಪಾಠಗಳು ಮುಗಿಯಲು ಸಾಧ್ಯವಾಗುತ್ತದೆ. ಇನ್ನು ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ ಪರಿಸ್ಥಿತಿ ಇದೇ ರೀತಿಯಲ್ಲಿದೆ ಎಂದೂ ಹೇಳಿದೆ.

ಈ ಸಮಸ್ಯೆಗಳು ಮುಂದುವರಿಯುತ್ತಾ ಹೋದರೆ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚುಗಡೆಯಾಗುವುದರಲ್ಲಿ ಸಂಶಯವಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಕೊಡುಗೆಯನ್ನು ನೀಡುತ್ತಿರುವ ಸಣ್ಣಸಣ್ಣ ಖಾಸಗಿ ಶಾಲೆಗಳನ್ನು ಉಳಿಸಲು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಈ ಶಾಲೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರ ಜೀವನವನ್ನು ಉಳಿಸಲಿಕ್ಕಾಗಿ ಸರಕಾರ ಶೀಘ್ರ ಯೋಜನೆಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.

ಖಾಸಗಿ ಶಾಲೆಯ ಶಿಕ್ಷಕರಿಗೆ ಬೇಕಾದ ಹಣವನ್ನು ಪ್ರತಿ ಶಾಲೆಯ ಮಾಲಕರಿಂದ ಒಟ್ಟುಗೂಡಿಸುವ ಪ್ರಯತ್ನವನ್ನು ಮಾಡಬೇಕು. ಅದಕ್ಕಾಗಿ ತಜ್ಞರ ಸಮಿತಿಯನ್ನು ನೇಮಿಸಿ ಖಾಸಗಿ ಶಾಲೆಯ ಮಾಲಕರ ಸಂಘಟನೆಗಳ ಜೊತೆ ಸರಕಾರವು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲ ಶಿಕ್ಷಕರನ್ನು ಸರಕಾರದ ಅಧೀನದಲ್ಲಿ ನೋಂದಣಿ ಮಾಡಿ ಪ್ರೋತ್ಸಾಹ ಧನ ನೀಡಬೇಕು. ಸರಕಾರಿ ಅತಿಥಿ ಉಪನ್ಯಾಸಕರ ಕೆಲಸವನ್ನು ಖಾಯಂಗೊಳಿಸಬೇಕು. ಅತಿಥಿ ಶಿಕ್ಷಕರಿಗೆ ಸಂಸ್ಥೆಗಳು ಬಾಕಿ ಇಟ್ಟಿರುವ ಗೌರವ ಧನವನ್ನು ಶೀಘ್ರವಾಗಿ ನೀಡಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾವು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News