ಕೊರೋನ ಪ್ರಕರಣಗಳ ಮೊದಲ ಮಾಹಿತಿ ನೀಡಿದ್ದು ನಮ್ಮ ಕಚೇರಿ, ಚೀನಾವಲ್ಲ: ವಿಶ್ವ ಆರೋಗ್ಯ ಸಂಸ್ಥೆ

Update: 2020-07-04 17:12 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜು. 4: ಮೊದಲ ಕೊರೋನ ವೈರಸ್ ಪ್ರಕರಣಗಳ ಬಗ್ಗೆ ಮೊದಲು ಮಾಹಿತಿ ನೀಡಿದ್ದು ಚೀನಾದಲ್ಲಿರುವ ನಮ್ಮ ಕಚೇರಿಯೇ ಹೊರತು, ಚೀನಾವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಈ ಸಂಬಂಧ ತಾನು ಮೊದಲು ನೀಡಿದ್ದ ಮಾಹಿತಿಗೆ ಅದು ಈಗ ತಿದ್ದುಪಡಿಯನ್ನು ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಎಪ್ರಿಲ್ 9ರಂದು ಕೋವಿಡ್-19ಕ್ಕೆ ಸಂಬಂಧಿಸಿದ ತನ್ನ ಚಟುವಟಿಕೆಗಳ ಮೊದಲ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಸಂಸ್ಥೆಯು ಮಹಾ ಸಾಂಕ್ರಾಮಿಕವನ್ನು ಆರಂಭದಲ್ಲಿ ನಿಭಾಯಿಸಿದ ರೀತಿಯ ಬಗ್ಗೆ ವ್ಯಕ್ತವಾದ ಟೀಕೆಗಳಿಗೆ ಪ್ರತಿಯಾಗಿ ಎಂಬಂತೆ ಅದು ಆ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.

ಸಾಂಕ್ರಾಮಿಕವನ್ನು ಆರಂಭದಲ್ಲೇ ನಿಗ್ರಹಿಸಲು ಸಾಧ್ಯವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಸರಿಯಾದ ಮಾಹಿತಿಯನ್ನು ನೀಡಿರಲಿಲ್ಲ ಹಾಗೂ ಅದು ಚೀನಾದ ಬಗ್ಗೆ ಮೃಧು ಧೋರಣೆ ಹೊಂದಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಈ ಆರೋಪವನ್ನು ಸಂಸ್ಥೆಯು ನಿರಾಕರಿಸಿದೆ.

ಚೀನಾದ ಹುಬೈ ಪ್ರಾಂತದಲ್ಲಿರುವ ವುಹಾನ್ ಮುನಿಸಿಪಲ್ ಆರೋಗ್ಯ ಆಯೋಗವು ಡಿಸೆಂಬರ್ 31ರಂದು ನ್ಯುಮೋನಿಯ ಪ್ರಕರಣಗಳನ್ನು ವರದಿ ಮಾಡಿತ್ತು ಎಂದಷ್ಟೇ ಆ ವೇಳಾಪಟ್ಟಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿತ್ತು. ಆ ಮಾಹಿತಿಯನ್ನು ನೀಡಿದ್ದು ಯಾರು ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು ಸ್ಪಷ್ಟಪಡಿಸಿರಲಿಲ್ಲ.

ಎಪ್ರಿಲ್ 20ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್, ಮೊದಲ ವರದಿ ಚೀನಾದಿಂದ ಬಂದಿದೆ ಎಂದು ಹೇಳಿದ್ದರು. ಆದರೆ, ವರದಿಯನ್ನು ಚೀನಾದ ಅಧಿಕಾರಿಗಳು ಕಳುಹಿಸಿದ್ದರೇ ಅಥವಾ ಬೇರೆ ಮೂಲದಿಂದ ಬಂತೇ ಎನ್ನುವುದನ್ನು ಅವರು ಸ್ಪಷ್ಪಪಡಿಸಿರಲಿಲ್ಲ.

ಆದರೆ ಈಗ ತನ್ನ ಆರಂಭಿಕ ಹೇಳಿಕೆಗೆ ತಿದ್ದುಪಡಿಯನ್ನು ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ, ಡಿಸೆಂಬರ್ 31ರಂದು ವರದಿ ಮಾಡಿದ್ದು ಚೀನಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಕಚೇರಿ ಎಂದು ಹೇಳಿದೆ. ವುಹಾನ್ ಆರೋಗ್ಯ ಆಯೋಗದ ವೆಬ್‌ಸೈಟ್‌ನಲ್ಲಿ ಮಾಧ್ಯಮಗಳಿಗಾಗಿ ಹಾಕಲಾದ ಹೇಳಿಕೆಯೊಂದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಕಚೇರಿಯು ತನ್ನ ಪ್ರಾದೇಶಿಕ ಕಚೇರಿಗೆ ‘ಸಾಂಕ್ರಾಮಿಕ ನ್ಯುಮೋನಿಯ’ ರೋಗಗಳ ಬಗ್ಗೆ ವರದಿ ಮಾಡಿತ್ತು ಎಂದು ತಿದ್ದುಪಡಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News