ಸಂಸದೀಯ ಸಮಿತಿ ಸಭೆಗಳಿಗೆ ಹೊಸ ನಿಯಮಗಳು ಪ್ರಕಟ

Update: 2020-07-04 17:48 GMT

ಹೊಸದಿಲ್ಲಿ,ಜು.4: ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳು ವಿರಾಮದ ಬಳಿಕ ಹಲವಾರು ಸಂಸದೀಯ ಸಮಿತಿಗಳ ಸಭೆಗಳು ಮುಂದಿನ ವಾರದಿಂದ ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸದಸ್ಯರ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಹೊಸ ನಿಯಮಾವಳಿಗಳನ್ನು ಲೋಸಭಾ ಸಚಿವಾಲಯವು ಹೊರಡಿಸಿದೆ.

ನೂತನ ನಿಯಮಗಳಂತೆ ಸಮಿತಿಗಳ ಮುಂದೆ ಹಾಜರಾಗುವ ಸಚಿವಾಲಯಗಳು ಗರಿಷ್ಠ ಐವರು ಅಧಿಕಾರಿಗಳನ್ನು ಮಾತ್ರ ಕಳುಹಿಸಬಹುದು. ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹೆಚ್ಚಿನ ಅಧಿಕಾರಿಗಳನ್ನು ಕಳುಹಿಸುವ ಅನಿವಾರ್ಯತೆಯಿದ್ದಲ್ಲಿ ಮೊಗಸಾಲೆಯಲ್ಲಿ ಅವರಿಗೆ ಆಸನ ವ್ಯವಸ್ಥೆಯನ್ನು ಮಾಡಬಹುದು ಮತ್ತು ಅಗತ್ಯಕ್ಕನುಗುಣವಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಲು ಅಧಿಕಾರಿಗಳನ್ನು ಕರೆಯಬಹುದಾಗಿದೆ.

 ಸಭಾ ಕೊಠಡಿಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಸದಸ್ಯರ ಉಪಸ್ಥಿತಿಯನ್ನು ಖಚಿತಪಡಿಸಕೊಳ್ಳಲು ಕಲಾಪಗಳನ್ನು ಅಕ್ಷರಶಃ ದಾಖಲಿಸಿಕೊಳ್ಳಲಾಗುವುದಿಲ್ಲ. ಕಲಾಪಗಳನ್ನು ದಾಖಲಿಸಿಕೊಳ್ಳಲು ಆಡಿಯೋ ಸಾಧನಗಳ ವ್ಯವಸ್ಥೆ ಮಾಡುವಂತೆ ಮತ್ತು ನಂತರ ಅದನ್ನು ಲಿಪ್ಯಂತರಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಬಹುದು. ಸಭೆಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಾಫ್ಟ್ ಕಾಪಿಗಳಲ್ಲಿ ಸದಸ್ಯರಿಗೆ ನೀಡತಕ್ಕದ್ದು ಮತ್ತು ಮುದ್ರಿತ ಸಾಮಗ್ರಿಯನ್ನು ಬಳಸುವಂತಿಲ್ಲ ಎಂದು ಸಚಿವಾಲಯವು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಸಭೆಗಳಲ್ಲಿ ಆಸನಗಳ ನಡುವೆ ಆರು ಅಡಿಗಳ ಸುರಕ್ಷಿತ ಅಂತರ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಮುಂದಿನ ವಾರ ಮೂರು ಸಂಸದೀಯ ಸಮಿತಿಗಳ ಸಭೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News