ಕೊರೋನ ಹಿನ್ನಲೆ ಲಾಕ್ ಡೌನ್: ಮಂಗಳೂರು ನಗರ ಅಕ್ಷರಶಃ ಸ್ತಬ್ಧ

Update: 2020-07-05 04:11 GMT

ಮಂಗಳೂರು, ಜು.5: ಮಾರಕ ಕೊರೋನ ವೈರಸ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರತಿ ರವಿವಾರ ಕರ್ಫ್ಯೂ ವಿಧಿಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಅಕ್ಷರಶಃ ಸ್ತಬ್ಧವಾಗಿದೆ.

ನಗರದ ಹಾದಿ ಬೀದಿಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಓಡಾಡುತ್ತಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಪಹರೆ ನೀಡುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ ಒಳ ರಸ್ತೆಗಳೂ ಬಹುತೇಕ ನಿರ್ಜನವಾಗಿವೆ. ಕೆಲವೇ ಕೆಲವರು ಮನೆ ಸಮೀಪದ ಹಾಲಿನ ಅಂಗಡಿಗಳಿಗೆ ತೆರಳುತ್ತಿರುವುದು ಕಂಡು ಬರುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಕೆಲವೊಂದು ಸರಕು ಸಾಗಾಣಿಕೆಯ ವಾಹನ, ಆಸ್ಪತ್ರೆ ಸಿಬ್ಬಂದಿಯನ್ನು ಸಾಗಿಸುವ ವಾಹನಗಳು ಮಾತ್ರ ಓಡಾಡುತ್ತಿವೆ.
ನಗರದ ಪಂಪ್ವೆಲ್, ಜಪ್ಪಿನಮೊಗರು, ಅಂಬೇಡ್ಕರ್ ವ್ರತ್ತ, ಕ್ಲಾಕ್ ಟವರ್, ಮೊದಲಾದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಓಡಾಟ ನಡೆಸುತ್ತಿರುವ ವಾಹನಗಳನ್ನು ತಡೆದು ವಿಚಾರಿಸುತ್ತಿದ್ದಾರೆ.

ಜನರೆಲ್ಲಾ ಮನೆಗಳಲ್ಲಿ ಉಳಿದು ಸರಕಾರಿ ಆದೇಶವನ್ನು ಪಾಲಿಸುತ್ತಿದ್ದರೆ, ಕೊರೋನ ಸೋಂಕಿನ ಭೀತಿಯ ನಡುವಯೇ ಪೌರ ಕಾರ್ಮಿಕರು ರಸ್ತೆ ಸ್ವಚ್ಚತಾ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News