ಲಾಕ್‌ಡೌನ್: ಉಡುಪಿ ಜಿಲ್ಲೆ ಸಂಪೂರ್ಣ ಸ್ತಬ್ಧ

Update: 2020-07-05 13:47 GMT

ಉಡುಪಿ, ಜು.5: ಹೆಚ್ಚುತ್ತಿರುವ ಕೋವಿಡ್- 19 ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ರವಿವಾರ ಉಡುಪಿ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, ಜನರ ಬೆಂಬಲದಿಂದಾಗಿ ಇಡೀ ಜಿಲ್ಲೆ ಸ್ತಬ್ಧಗೊಂಡಿದೆ.

ಆಸ್ಪತ್ರೆ, ಕ್ಲಿನಿಕ್, ಕೆಲವೊಂದು ಮೆಡಿಕಲ್, ಪೆಟ್ರೋಲ್ ಬಂಕ್, ಹಾಲಿನ ಅಂಗಡಿ ಹೊರತು ಪಡಿಸಿ ಹೊಟೇಲ್ ಸಹಿತ ಎಲ್ಲ ಅಂಗಡಿ ಮುಗ್ಗಟ್ಟುಗಳು ಬೆಳ್ಳಗೆಯಿಂದ ಬಂದ್ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೆರಣಿಕೆಯ ಸರಕು ಸಾಗಾಟ ಹಾಗೂ ಅಗತ್ಯ ವಾಹನಗಳನ್ನು ಬಿಟ್ಟರೆ ಇತರ ಯಾವುದೇ ವಾಹನಗಳು ಸಂಚರಿಸುತ್ತಿರಲಿಲ್ಲ.

ಜನ ಮನೆಯಿಂದ ಹೊರಗಡೆ ಬಾರದೆ ಲಾಕ್‌ಡೌನ್ ಬೆಂಬಲಿಸಿರುವುದು ಕಂಡುಬಂದಿದೆ. ಜಿಲ್ಲಾಡಳಿತ ಮುಂಚಿತವಾಗಿ ಅನುಮತಿ ನೀಡಿರುವ ವಿವಾಹ ಸಮಾರಂಭ ನಡೆದಿರುವ ಬಗ್ಗೆ ವರದಿಯಾಗಿದೆ. ಸರಕಾರಿ, ಖಾಸಗಿ, ಸಿಟಿ ಬಸ್ ಗಳು, ರಿಕ್ಷಾ, ಕಾರುಗಳು ರಸ್ತೆಗೆ ಇಳಿದಿರಲಿಲ್ಲ. ತರಕಾರಿ, ಮಾಂಸದ ಅಂಗಡಿಗಳು ಕೂಡ ಬಂದ್ ಆಗಿದ್ದವು. ವಾಹನಗಳಿಲ್ಲದೆ ರಸ್ತೆಗಳು, ಬಸ್‌ಗಳಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.
ಉಡುಪಿ ನಗರದ ಕಲ್ಸಂಕದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಕಾರ್ಯ ನಡೆಸಲಾಗಿತ್ತು. ಅದೇ ರೀತಿ ಕುಂದಾಪುರದಲ್ಲೂ ವಾಹನಗಳ ತಪಾ ಸಣೆಯನ್ನು ಪೊಲೀಸರು ನಡೆಸಿದರು. ಕುಂದಾಪುರ, ಕಾರ್ಕಳ, ಬೈಂದೂರು, ಬ್ರಹ್ಮಾವರ, ಕಾಪು, ಪಡುಬಿದ್ರಿ, ಶಿರ್ವ, ಹಿರಿಯಡ್ಕ ಕೂಡ ಸಂಪೂರ್ಣ ಬಂದ್ ಆಗಿತ್ತು. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ನಿರ್ಗತಿಕರಿಗೆ ಊಟ ವಿತರಣೆ
ರವಿವಾರ ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಧ್ಯಾಹ್ನದ ಊಟ ಇಲ್ಲದೆ ತೊಂದರೆ ಪಡುತ್ತಿದ್ದ ನಿರ್ಗತಿಕರಿಗೆ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಊಟವನ್ನು ವಿತರಿಸಿದರು.

ನಗರದ ವಿವಿಧ ಕಡೆಗಳಲ್ಲಿನ ಸುಮಾರು 50 ಮಂದಿಯನ್ನು ಗುರುತಿಸಿ ಊಟವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗಳಿಗೂ ವಿಶು ಶೆಟ್ಟಿ ಊಟ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News