ಗುರುಪುರದಲ್ಲಿ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಮೃತ್ಯು

Update: 2020-07-05 14:56 GMT

ಮಂಗಳೂರು, ಜು.5: ನಗರದ ಹೊರವಲಯದ ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ಎರಡು ಮನೆಗಳು ಸಂಪೂರ್ಣ ಮುಚ್ಚಿಹೋಗಿದ್ದು, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ. ಸುಮಾರು ನಾಲ್ಕು ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆಯಲಾಯಿತು.

ಗುರುಪುರ ಮೂಳೂರು ತಾರಿಕರಿಯ ನಿವಾಸಿ ಶರೀಫ್-ಶಾಹಿದಾ ದಂಪತಿಯ ಪುತ್ರ ಸಫ್ವಾನ್ (16), ಸಹಲಾ (10) ಮೃತಪಟ್ಟವರು ಎಂದು ತಿಳಿದುಬಂದಿದೆ. ಮೃತ ಮಕ್ಕಳ ತಾಯಿ ಶಾಹಿದಾ (36) ಸಹಿತ ಇಬ್ಬರು ಗಾಯಗೊಂಡಿದ್ದಾರೆ.

ಘಟನೆ ವಿವರ: ಗುರುಪುರದ ಬಂಗ್ಲೆಗುಡ್ಡೆಯಲ್ಲಿ ರವಿವಾರ ಮಧ್ಯಾಹ್ನ 1:15ರ ಸುಮಾರಿಗೆ ವಠಾರದವರೆಲ್ಲ ಮನೆಯಂಗಳದಲ್ಲಿ ನಿಂತುಕೊಂಡು, ಮಳೆ ನೀರು ಸರಾಗವಾಗಿ ಹರಿಯಲು ತೋಡು ರಚಿಸುವ ಕುರಿತು ಮಾತುಕತೆ ನಡೆಸುತ್ತಿದ್ದರು. ಈ ವೇಳೆ ನಿರೀಕ್ಷೆ ಇಲ್ಲದೆ ಮನೆಯ ಹಿಂದಿನ ಗುಡ್ಡ ಜರಿಯಲು ಆರಂಭಿಸಿತು. ಈ ವೇಳೆ ಹೊರಗಿದ್ದ ಜನರು ಬೊಬ್ಬೆ ಹಾಕಿದ್ದು, ಮನೆಯವರು ಭಯಭೀತರಾಗಿ ಕೆಳಗಡೆ ಓಡಿ ಹೋಗಿದ್ದರು.
ಏತನ್ಮಧ್ಯೆ, ಮೋನು ಎಂಬವರ ಮನೆಯೊಳಗೆ ಮಲಗಿದ್ದ ಸಫ್ವಾನ್ ಮತ್ತು ಸಹಲಾ ಎಂಬವರು ಮನೆ ಮೇಲೆ ಬಿದ್ದ ಮಣ್ಣಿನಡಿಯಲ್ಲಿ ಸಿಲುಕಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಮನೆಯ ಮೇಲೆ ಗುಡ್ಡದ ಮಣ್ಣು ಜರಿದು ಬಿದ್ದಿದ್ದು, ಮನೆಯವರು ಅಪಾಯವರಿತು ತಕ್ಷಣ ಬೇರೆಡೆಗೆ ಹೋಗಿದ್ದರು.

ಗುರುಪುರದ ಬಂಗ್ಲೆಗುಡ್ಡೆಯ ನಿವಾಸಿ ಮುಹಮ್ಮದ್ ಹಾಗೂ ಅಶ್ರಫ್ ಎಂಬವರ ಮನೆಯ ಮೇಲೆ ಗುಡ್ಡೆಯ ಮಣ್ಣು ಜರಿದು ಮನೆ ನೆಲಸಮವಾಗಿದೆ. ರಜೆ ನಿಮಿತ್ತ ಮೋನು ಅವರ ಮನೆಗೆ ಗುರುಪುರ ತಾರಿಕರಿಯದ ಏಳೆಂಟು ಮಂದಿ ಸಂಬಂಧಿಕರು ಬಂದಿದ್ದರು. ಗುಡ್ಡ ಜರಿಯುವ ಶಬ್ದ ಕೇಳುತ್ತಿದ್ದಂತೆ ಮನೆಯಲ್ಲಿದ್ದ 11 ಮಂದಿಯ ಪೈಕಿ ಎಂಟು ಮಂದಿ ಹೊರ ಬಂದಿದ್ದರು. ಮನೆಯಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಮಣ್ಣಿನಲ್ಲಿ ಸಂಪೂರ್ಣವಾಗಿ ಸಿಲುಕಿದ್ದರೆ, ಮಕ್ಕಳ ತಾಯಿ ಶಾಹಿದಾ ಅಲ್ಪ ಪ್ರಮಾಣದಲ್ಲಿ ಸಿಲುಕಿದ್ದರು. ಶಾಹಿದಾ ಅವರನ್ನು ಮೊದಲು ರಕ್ಷಿಸಿ ಹೊರ ತರಲಾಯಿತು. ಶಾಹಿದಾ ಅವರಿಗೆ ಮುಖದ ಮೇಲೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಮನೆ ಸ್ಥಳಾಂತರ ಮುನ್ನವೇ ದುರ್ಘಟನೆ!: ಗುರುಪುರದ ವ್ಯಾಪ್ತಿಯಲ್ಲಿ ಸುಮಾರು 20 ದಿನಗಳ ಹಿಂದೆ ಆವರಣ ಗೋಡೆ ಜರಿದು ನಾರಾಯಣ ನಾಯ್ಕ್ ಎಂಬವರು ಮೃತಪಟ್ಟ ಸಂದರ್ಭದಲ್ಲೇ ಸ್ಥಳಕ್ಕೆ ಭೇಟಿ ನೀಡಿ, ಮಳೆಗಾಲದಲ್ಲಿ ಅಪಾಯ ಸಾಧ್ಯತೆ ಇರುವ ಇಲ್ಲಿನ ಕೆಲವು ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ ನೀಡಿದ್ದೇವೆ. ಕೆಲವು ಕಡೆ ಗುಡ್ಡದ ನೀರು ಸರಾಗವಾಗಿ ಹರಿಯುವಲ್ಲಿ ತಡೆಯಾಗಿದ್ದು, ಗುಡ್ಡದಲ್ಲೇ ನೀರು ಇಂಗಿ ಗುಡ್ಡದ ಮಣ್ಣು ಸಡಿಲಗೊಂಡಿದೆ. ಪರಿಣಾಮ ಗುಡ್ಡ ಕುಸಿತ ಸಂಭವಿಸಿದೆ. ಇವರನ್ನೆಲ್ಲ ಮಳೆಗಾಲದ ಸುಮಾರು ಎರಡು ತಿಂಗಳು ಬೇರಡೆಗೆ ಸ್ಥಳಾಂತರಿಸುವ ಮುನ್ನವೇ ಈ ದುರಂತ ಸಂಭವಿಸಿತು ಎಂದು ಗ್ರಾಮ ಪಂಚಾಯತ್ ಮೂಲವೊಂದು ತಿಳಿಸಿದೆ.

ಗುರುಪುರದಲ್ಲಿ ವಿದ್ಯುತ್ ಕಡಿತ: ವಿದ್ಯುತ್ ಕಂಬಗಳು ಮತ್ತು ಹತ್ತಾರು ಮರಗಳು ರಸ್ತೆಗೆ ಬಿದ್ದಿದ್ದು, ಸುಗಮ ಕಾರ್ಯಾಚರಣೆಗಾಗಿ ಗುರುಪುರ ಪ್ರದೇಶದಲ್ಲಿ ವಿದ್ಯುತ್ ಕಡಿತ ಮಾಡಲಾಯಿತು. ಸ್ಥಳದಲ್ಲಿದ್ದ ಒಂದು ಟಿಪ್ಪರ್, ರಿಕ್ಷಾ, ಮೂರು ದ್ವಿಚಕ್ರ ವಾಹನ ಮಣ್ಣಿನಡಿಗೆ ಬಿದ್ದು ನಜ್ಜುಗುಜ್ಜಾಗಿವೆ. ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಗುಡ್ಡದಲ್ಲಿ ನೀರಿನ ಒರತೆ ಹೆಚ್ಚಾಗಿ ಮಠದಗುಡ್ಡೆ, ಬಂಗ್ಲೆಗುಡ್ಡೆ, ಅಣೆಬಳಿ ವಸತಿ ಪ್ರದೇಶದ ಅಲ್ಲಲ್ಲಿ ಗುಡ್ಡೆ ಜರಿದಿದ್ದು, ಬಂಡೆಗಳು ಉರುಳಿವೆ.

ಸ್ಥಳಕ್ಕೆ ಗಣ್ಯರ ಭೇಟಿ: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಸಹಾಯಕ ಆಯುಕ್ತ ಎಸಿಪಿ ಬೆಳ್ಳಿಯಪ್ಪ, ತಹಶೀಲ್ದಾರ್ ಗುರುಪ್ರಸಾದ್, ಬಜ್ಪೆ ವೃತ್ತ ನಿರೀಕ್ಷಕ ಕೆ.ಆರ್. ನಾಯ್ಕೆ, ತಾಪಂ ಸಿಇಒ ಸದಾನಂದ ಸಫಲಿಗ, ಮಂಗಳೂರು ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವ ಸಹಿತ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದರು.

ಜನಸ್ತೋಮ: ದುರಂತ ಸಂಭವಿಸಿದ ಸ್ಥಳದ ಮೇಲಿನ ಗುಡ್ಡದಲ್ಲಿ ಹಾಗೂ ಸುತ್ತಲ ಗುಡ್ಡ ಪ್ರದೇಶಗಳಲ್ಲಿ ನೂರಾರು ಮಂದಿ ಕಾರ್ಯಾಚರಣೆ ವೀಕ್ಷಿಸುತ್ತಿದ್ದರು. ಪರಿಸರದ ಎರಡು ರಸ್ತೆ, ಪಂಚಾಯತ್ ರಸ್ತೆಗಳಲ್ಲಿ ಸಾವಿರಾರು ವಾಹನಗಳು ತುಂಬಿದ್ದವು. ಮೃತದೇಹಗಳನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

60 ಮನೆ ಸ್ಥಳಾಂತರಕ್ಕೆ ನಳಿನ್ ಸೂಚನೆ
ಗುರುಪುರದಲ್ಲಿ ಗುಡ್ಡೆ ಜರಿಯುತ್ತಿರುವ ಪ್ರದೇಶದಲ್ಲಿರುವ ಸುಮಾರು 60 ಮನೆಯವರನ್ನು ಬೇರೆಡೆಗೆ ಸರಕಾರಿ ಸ್ವಾಮ್ಯದ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಇಲ್ಲಿನ ಕೆಲವರು ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಉಳಿದ ಕುಟುಂಬಗಳನ್ನು ಗುರುಪುರ ಹೈಸ್ಕೂಲ್, ಪ್ರಾಥಮಿಕ ಶಾಲೆ, ಬಂಗ್ಲೆಗುಡ್ಡೆ ಹಾಸ್ಟೆಲ್, ಪಂಚಾಯತ್ ಸಭಾಗೃಹ, ಗುರುಕಂಬ್ಳ ಶಾಲೆಗಳ ಕಟ್ಟಡಗಳಿಗೆ ಸ್ಥಳಾಂತರಿಸುವ ಕುರಿತು ಗುರುಪುರ ಗ್ರಾಮ ಪಂಚಾಯತ್ ಪಿಡಿಒ ಅಬೂಬಕ್ಕರ್, ತಹಶೀಲ್ದಾರ್, ಉಪ-ತಹಶೀಲ್ದಾರ್, ಪಂಚಾಯತ್ ಸದಸ್ಯರೊಂದಿಗೆ ಸಂಸದರು ಸಮಾಲೋಚಿಸಿದರು.

ವರದಿ ಕಾರ್ಯಗತಗೊಂಡಿಲ್ಲ: ತಾಪಂ ಇಒ
ಗುರುಪುರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮಠದಗುಡ್ಡೆ ಮೂಳೂರು ಸೈಟ್ ಹಾಗೂ ಅಣೆಬಳಿಯ 16 ಮನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ವರದಿ ನೀಡಿದ್ದೆ. ಆದರೆ ಈವರೆಗೆ ಈ ವರದಿ ಕಾರ್ಯಗತಗೊಂಡಿಲ್ಲ ಎಂದು ತಾಪಂ ಇಒ ಸದಾನಂದ ಸಫಲಿಗ ತಿಳಿಸಿದರು.

ಅಪಾಯದಲ್ಲಿ 60 ಮನೆಗಳು!
ಕರಾವಳಿಯಲ್ಲಿ ಕಳೆದ ಹಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಗುರುಪುರದ ಬಂಗ್ಲೆಗುಡ್ಡೆಯ ಗುಡ್ಡ ಜರಿದ ಪ್ರದೇಶದಲ್ಲಿ ಮಳೆನೀರು ಹರಿಯಲು ಮಾರ್ಗವಿರಲಿಲ್ಲ ಎಂದು ತಿಳಿದುಬಂದಿದೆ. ಗುಡ್ಡದ ಮೇಲ್ಭಾಗದಲ್ಲಿ ಮಳೆನೀರು ಸಂಗ್ರಹಗೊಂಡು ಒಮ್ಮೆಲೆ ರಭಸದಿಂದ ಗುಡ್ಡ ಕುಸಿತಕಂಡಿದೆ ಎನ್ನಲಾಗಿದೆ. ಘಟನೆಯಲ್ಲಿ ಈಗಾಗಲೇ ಎರಡು ಮನೆಗಳು ಸಂಪೂರ್ಣ ಜಖಂಗೊಂಡು ಹಾನಿಯಾಗಿವೆ. ಇನ್ನೆರಡು ಮನೆಗಳು ಇನ್ನೇನು ಕುಸಿಯುವ ಹಂತದಲ್ಲಿದ್ದು, ಒಟ್ಟು 60 ಮನೆಗಳಿಗೆ ಅಪಾಯ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಾಲ್ಕು ಗಂಟೆ ನಿರಂತರ ಕಾರ್ಯಾಚರಣೆ
ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡೆ ಜರಿಯುತ್ತಿದ್ದರೂ ಅಪಾಯ ಲೆಕ್ಕಿಸದೆ ಸುಮಾರು ನಾಲ್ಕು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಪೊಲೀಸ್, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಯುವಕರ ತಂಡ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸಿತು. ಐದಾರು ಜೆಸಿಬಿಗಳು, ಹಿಟಾಚಿ, ಲಾರಿ ಸಿಬ್ಬಂದಿಯು ಕಡಿದಾದ ಗುಡ್ಡದ ಮೇಲ್ಗಡೆ ನಿರಂತರ ಅಪಾಯಕಾರಿ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ಮಣ್ಣಿನಡಿಯಿಂದ ಹೊರತೆಗೆದರು. ಇಬ್ಬರ ಮೃತದೇಹವೂ ಒಂದೇ ಸ್ಥಳದಲ್ಲಿ ಪತ್ತೆಯಾಗಿದೆ. ಮೃತದೇಹಗಳನ್ನು ನಗರದ ಆಸ್ಪತ್ರೆಗೆ ರವಾನಿಸಲಾಯಿತು.

ಊರಿಗೆ ತೆರಳಲು ತಯಾರಾಗಿದ್ದ ಮಕ್ಕಳು!
‘ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿದು ಮೃತಪಟ್ಟ ಇಬ್ಬರು ಮಕ್ಕಳು ತಮ್ಮ ಊರಿಗೆ ತೆರಳಲು ತಯಾರಾಗಿದ್ದರು. ಕೂಡಲೇ ಮನೆಗೆ ತೆರಳಿದ್ದರೆ ಜೀವವಾದರೂ ಉಳಿಯುತ್ತಿತ್ತು’ ಎನ್ನುತ್ತಾ ಕಣ್ಣೀರು ಹಾಕುತ್ತಾರೆ ಸಂಬಂಧಿ ಮುಹಮ್ಮದ್ ಅಶ್ರಫ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News