ವೈದ್ಯರಿಂದ ಕೋಮು ಪ್ರಚೋದಕ ಸಂದೇಶ ರವಾನೆ ಆರೋಪ: ವಾದ ಪ್ರತಿವಾದಗಳಿಲ್ಲದೆ ದೂರು ಅರ್ಜಿ ವಜಾ

Update: 2020-07-05 18:08 GMT

ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಸಂದೇಶ ರವಾನಿಸಿದ್ದಾರೆಂದು ಆರೋಪಿಸಿ ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ ಎಂಬವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿ ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ನೀಡಿದ ಅರ್ಜಿಯನ್ನು ನ್ಯಾಯಾಲಯ ವಾದ ಪ್ರತಿವಾದಗಿಳಿಲ್ಲದೆ ವಜಾಗೊಳಿಸಿದೆ. 

ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ನಿವಾಸಿ ಪಿ.ಬಿ.ಕೆ. ಮಹಮ್ಮದ್ ಎಂಬವರು ಸಲ್ಲಿಸಿದ್ದ ಖಾಸಗಿ ದೂರನ್ನು ಪುತ್ತೂರು ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಅವರು ವಜಾಗೊಳಿಸಿ ಆದೇಶ ನೀಡಿದ್ದಾರೆ.

ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರು ವಾಟ್ಸಪ್ ಗ್ರೂಪ್‍ನಲ್ಲಿ `ಪ್ರೀತಿಯ ಕೊರೋನಾ... ಹೇಗಿದ್ದರೂ ಭಾರತಕ್ಕೆ ಬಂದು ಬಿಟ್ಟಿದ್ದಿಯಲ್ಲಾ, ಮೋದಿಯ ವಿರೋಧಿಗಳನ್ನು ಒಮ್ಮೆ ಭೇಟಿ ಮಾಡಿ ಹೋಗು. ಇಲ್ಲದಿದ್ದರೆ ಅವರೆಲ್ಲಾ ಸಾಕ್ಷಿ ಕೇಳುತ್ತಾರೆ' ಎಂಬ ಸಂದೇಶವನ್ನು ಫಾರ್ವರ್ಡ್ ಮಾಡಿದ್ದಾರೆ. ಈ ಮೂಲಕ ಅವರು ಕೋಮು ಪ್ರಚೋದನೆ ಮಾಡಿದ್ದಾರೆ. ಅಲ್ಲದೆ, ಪರಸ್ಪರ ಪಂಗಡಗಳನ್ನು ಎತ್ತಿ ಕಟ್ಟುವ ಹುನ್ನಾರ ನಡೆಸಿದ್ದಾರೆ. ಆದುದರಿಂದ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ 153 ಎ, 153 ಬಿ, 295, 295(ಎ), 505(1)ಸಿ, ಮತ್ತು 66 ಹಾಗೂ 67 ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳುವಂತೆ  ಪಿ.ಬಿ.ಕೆ. ಮಹಮ್ಮದ್ ಎಂಬವರು ನ್ಯಾಯವಾದಿ ಮಜೀದ್‍ಖಾನ್ ಅವರ ಮೂಲಕ ಪುತ್ತೂರು ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎ.ಸಿ.ಜೆ.ಎಂ. ನ್ಯಾಯಾಲಯಕ್ಕೆ ಜೂನ್ 29 ರಂದು ಖಾಸಗಿ ದೂರು ಸಲ್ಲಿಸಿದ್ದರು.

ಈ ದೂರನ್ನು ಸ್ವಯಂಪ್ರೇರಿತವಾಗಿ ವಜಾಗೊಳಿಸಿದ ನ್ಯಾಯಾಧೀಶ ಮಂಜುನಾಥ್ ಅವರು ದೂರನ್ನು ವಜಾಗೊಳಿಸಿ ಅದೇಶಿಸಿದ್ದಾರೆ. ಡಾ. ಸುರೇಶ್ ಪುತ್ತೂರಾಯರ ಪರ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News