ಉಡುಪಿ: ರವಿವಾರ 45 ಮಂದಿಗೆ ಕೊರೋನ ಸೋಂಕು ದೃಢ

Update: 2020-07-05 16:29 GMT

ಉಡುಪಿ, ಜು.5: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪತ್ತೆಗಾಗಿ ನಡೆಸಿದ ಶಂಕಿತರ ಗಂಟಲುದ್ರವ ಮಾದರಿಯ ಪರೀಕ್ಷೆಯಲ್ಲಿ ರವಿವಾರ 45 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಉಳಿದಂತೆ 518 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶವನ್ನು ನೀಡಿದೆ. ಇಂದು ಮತ್ತೆ 279 ಮಂದಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 45 ಮಂದಿಯಲ್ಲಿ ಮಹಾರಾಷ್ಟ್ರದಿಂದ ಬಂದ 20 ಮಂದಿ, ಬೆಂಗಳೂರಿನಿಂದ ಬಂದ ಇಬ್ಬರು, ಚಿತ್ರದುರ್ಗದಿಂದ ಬಂದ ಒಬ್ಬರು ಇದ್ದು, ಉಳಿದವರೆಲ್ಲರೂ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಸ್ಥಳೀಯ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಸೋಂಕಿತರಲ್ಲಿ ಉಡುಪಿ ತಾಲೂಕಿನ 22 ಮಂದಿ, ಕುಂದಾಪುರ ತಾಲೂಕಿನ 17 ಮಂದಿ ಹಾಗೂ ಕಾರ್ಕಳ ತಾಲೂಕಿನ ಆರು ಮಂದಿ ಸೇರಿದ್ದಾರೆ. 18 ಮಂದಿ ಪುರುಷರು, 22 ಮಂದಿ ಮಹಿಳೆಯರು ಅಲ್ಲದೇ ಐವರು ಮಕ್ಕಳು (2ಗಂಡು, 3 ಹೆಣ್ಣು) ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ರವಿವಾರದ 45 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1322ಕ್ಕೇರಿದೆ.

22 ಮಂದಿ ಗುಣಮುಖ: ಜಿಲ್ಲೆಯಲ್ಲಿ ಪಾಸಿಟಿವ್ ಬಂದು ಚಿಕಿತ್ಸೆಯ ಬಳಿಕ ಗುಣಮುಖರಾದ 22 ಮಂದಿ ಇಂದು ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇವರಲ್ಲಿ ಉಡುಪಿ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಆರು ಮಂದಿ, ಕಾರ್ಕಳ ಆಸ್ಪತ್ರೆಯ ಏಳು ಹಾಗೂ ಕುಂದಾಪುರ ಆಸ್ಪತ್ರೆಯ 9 ಮಂದಿ ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಬಿಡುಗಡೆ ಗೊಂಡವರ ಸಂಖ್ಯೆ ಜಿಲ್ಲೆಯಲ್ಲಿ 1136ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 183 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

ಸೋಂಕಿನ ಪರೀಕ್ಷೆಗಾಗಿ ರವಿವಾರ ಪಡೆದ 279 ಮಂದಿಯ ಗಂಟಲುದ್ರವದ ಸ್ಯಾಂಪಲ್‌ಗಳಲ್ಲಿ ಕೋವಿಡ್ ಶಂಕಿತರು 25 ಮಂದಿ, ಕೋವಿಡ್ ಸಂಪರ್ಕಿತರು 137 ಮಂದಿ, ಉಸಿರಾಟ ತೊಂದರೆಯ ಐವರು, ಶೀತಜ್ವರದಿಂದ ಬಳಲುವ 36 ಮಂದಿ ಹಾಗೂ ದೇಶದ ವಿವಿದೆಡೆಗಳ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 76 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ 279 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 17,824ಕ್ಕೇರಿದೆ. ಇವುಗಳಲ್ಲಿ ಈವರೆಗೆ 15,074 ನೆಗೆಟಿವ್, 1322 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 1428 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 30 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರು ಕೋವಿಡ್ ಶಂಕಿತರು, 10 ಮಂದಿ ಉಸಿರಾಟ ತೊಂದರೆಯವರು ಹಾಗೂ 17 ಮಂದಿ ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 12 ಮಂದಿ ಬಿಡುಗಡೆಗೊಂಡಿದ್ದು, 127 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 15 ಮಂದಿ ಸೇರಿದಂತೆ ಒಟ್ಟು 5952 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1057 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

ಒಂದು ತಿಂಗಳ ಮಗು, ಅಜ್ಜಿ ಪಾಸಿಟಿವ್
ಹಾಸನದಿಂದ ಜು.1ರಂದು ತಂದೆ-ತಾಯಿಯೊಂದಿಗೆ ಉಡುಪಿಗೆ ಆಗಮಿಸಿದ ಒಂದು ತಿಂಗಳ ಹೆಣ್ಣು ಮಗು ಹಾಗೂ ಆಕೆಯ ಅಜ್ಜಿ (65) ಇಂದು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಅವರಿಬ್ಬರೂ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಅಲ್ಲದೇ 3,10,9 ವರ್ಷ ಪ್ರಾಯ ಹೆಣ್ಣು ಮಕ್ಕಳು ಹಾಗೂ 5 ಮತ್ತು 9 ವರ್ಷ ಪ್ರಾಯದ ಗಂಡು ಮಕ್ಕಳಲ್ಲಿ, 68, 64, 65 ವರ್ಷ ಪ್ರಾಯದ ಹಿರಿಯ ನಾಗರಿಕರಲ್ಲಿ ಸೋಂಕು ಕಂಡುಬಂದಿದೆ. ಮಹಾರಾಷ್ಟ್ರದಿಂದ ಬಂದ 18 ಮಂದಿ, ಆಂಧ್ರದಿಂದ ಬಂದ ಒಬ್ಬರು ಸಹ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ಮಣಿಪಾಲದ ಇಬ್ಬರು ಬ್ಯಾಂಕ್ ನೌಕರರಲ್ಲಿ, ಮಾಹೆಯ ಒಬ್ಬ ಸಿಬ್ಬಂದಿಯಲ್ಲೂ ಪಾಸಿಟಿವ್ ಪತ್ತೆಯಾಗಿದ್ದು, ಎರಡು ಬ್ಯಾಂಕ್ ಶಾಖೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೋಟ, ಸಾಲಿಗ್ರಾಮದಲ್ಲಿ 10 ಮಂದಿಗೆ ಕೊರೋನ ಪಾಸಿಟಿವ್: 
ರವಿವಾರ ಕೊರೋನ ಸೋಂಕಿಗೆ ಪಾಸಿಟಿವ್ ಬಂದವರಲ್ಲಿ ಕೋಟ ಮತ್ತು ಸಾಲಿಗ್ರಾಮ ಪರಿಸರದ 10 ಮಂದಿ ಸೇರಿದ್ದಾರೆ. ಇವರೆಲ್ಲರ ಅಂಗಡಿ ಮತ್ತು ಮನೆಗಳನ್ನು ಸೀಲ್‌ಡೌನ್ ಮಾಡಿರುವ ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳು ಅವರನ್ನು ಎಲ್ಲಾ 10 ಮಂದಿಯನ್ನು ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿವೆ.

ಕೋಟದಲ್ಲಿ ಕೆಲದಿನಗಳ ಹಿಂದೆ ಪಾಸಿಟಿವ್ ಬಂದ ಇಲ್ಲಿನ ಹೊಟೇಲ್ ಒಂದರ ಮಾಲಕರ ಸಂಪರ್ಕದಿಂದ ಅದೇ ಹೊಟೇಲ್‌ನಲ್ಲಿ ಕೆಲಸ ಮಾಡುವ ಐವರಲ್ಲಿ ಸೋಂಕು ಪತ್ತೆಯಾಗಿದೆ. ಹೊರರಾಜ್ಯ ಹಾಗೂ ಬೆಂಗಳೂರಿನಿಂದ ಊರಿಗೆ ಬಂದವರು ಹೆಚ್ಚಾಗಿ ಈ ಹೊಟೇಲ್‌ಗೆ ಭೇಟಿ ನೀಡುವುದರಿಂದ ಯಾರ ಮೂಲಕ ಸೋಂಕು ತಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ನಿನ್ನೆ ಈ ಹೊಟೇಲ್‌ನ ಗ್ರಾಹಕರಾದ ಅಟೋಡ್ರೈವರ್ ಒಬ್ಬರಲ್ಲೂ ಸೋಂಕು ಕಾಣಿಸಿಕೊಂಡಿತ್ತು.
ಇವರೊಂದಿಗೆ ಅದೇ ಪರಿಸರದ ಅಂಗಡಿಯೊಂದರ ನಾಲ್ವರು ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಅಂಗಡಿಯ ಮಾಲಕರ ಫಲಿತಾಂಶ ನೆಗೆಟಿವ್ ಆದರೂ, ಅವರ ಕುಟುಂಬದ ನಾಲ್ವರು ಸದಸ್ಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರೂ ಇದೀಗ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾಲಿಗ್ರಾಮದ ಮೆಡಿಕಲ್ ರೆಫ್ ಒಬ್ಬರಲ್ಲೂ ಇಂದು ಸೋಂಕು ಕಾಣಿಸಿಕೊಂಡಿದೆ. ಇವರು ವೃತ್ತಿ ಸಂಬಂಧ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಇವರೊಂದಿಗೆ ಕುಂದಾಪುರದ ಟ್ರಾಫಿಕ್ ಪೊಲೀಸರೊಬ್ಬರೂ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಆರೋಗ್ಯ ಇಲಾಖೆ ಇಂದು ಬಿಡುಗಡೆ ಮಾಡಿದ ಪಾಸಿಟಿವ್ ಬಂದವರ ಪಟ್ಟಿಯಲ್ಲಿ ಮಲ್ಪೆ ಪರಿಸರದ ನಗರಸಭಾ ಸದಸ್ಯರು, ಸ್ಥಳೀಯ ಹೊಟೇಲ್ ಒಂದರ ಮಾಲಕರ ಹೆಸರು ಸೇರ್ಪಡೆಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News