ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಇಳಿಮುಖ

Update: 2020-07-05 15:18 GMT
ಸಾಂದರ್ಭಿಕ ಚಿತ್ರ

ಮಂಗಳೂರು,ಜು .5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಕಂಡು ಬಂದ ಮಳೆಯ ಅಬ್ಬರ ಇಂದು ಇಳಿಮುಖವಾಗಿದೆ. ಜಿಲ್ಲೆಯಾದ್ಯಂತ ಇಂದು ಮಳೆ ಬಿಡುವು ನೀಡಿದ್ದು, ಎರಡು ದಿನಗಳ ಕಾಲ ಸುರಿದ ಮಳೆಗೆ ಹಲವು ಕಡೆ ಗುಡ್ಡ ಕುಸಿದ ಘಟನೆಗಳು ನಡೆದಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟದಲ್ಲೂ ಇಳಿಮುಖವಾಗಿದೆ.

ಶನಿವಾರ ತುಂಬೆಯಲ್ಲಿ 3.8 ಮೀಟರ್‌ಗೆ ಏರಿಕೆಯಾಗಿದ್ದ ನೇತ್ರಾವತಿ ನದಿ ನೀರಿನ ಮಟ್ಟ 3.5 ಮೀಟರ್‌ಗೆ ಕುಸಿದಿದೆ. ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿ ನೀರಿನ ಮಟ್ಟ 4ಮೀಟರ್ ಎತ್ತರದಲ್ಲಿ ಹರಿಯುತ್ತಿದೆ.ಈ ಬಾರಿ ನಿಗದಿತ ಅವಧಿಗಿಂತ ಮೊದಲೆ ಕರಾವಳಿಗೆ ಮುಂಗಾರು ಪ್ರವೇಶ ಆಗಿದ್ದರೂ ಕೂಡಾ ಒಂದು ವಾರದಲ್ಲಿ ಕ್ಷೀಣಿಸಿತ್ತು.ಇದರಿಂದಾಗಿ ಜಿಲ್ಲೆಯಲ್ಲಿ ವಾಡಿಕೆಯ ಮಳೆಗಿಂತ 25 ಮಿ.ಮೀ ಕಡಿಮೆ ಮಳೆ ಸುರಿದಿದೆ. ಜುಲೈ 5ರಂದು ಜಿಲ್ಲೆಯಲ್ಲಿ 27.1 ಮಿ.ಮೀ ಸರಾಸರಿ ಮಳೆ ಸುರಿದಿದೆ. ಜುಲೈ 4ರಂದು ಜಿಲ್ಲೆಯಾದ್ಯಂತ ಸರಾಸರಿ 70.0 ಮಿ.ಮೀ ಮಳೆ ಸುರಿದಿತ್ತು.ಶನಿವಾರ ಬಂಟ್ವಾಳ ತಾಲೂಕಿನಲ್ಲಿ ಇತರ ಕಡೆಗಿಂತ ಹೆಚ್ಚು ಮಳೆ ಸುರಿದಿತ್ತು, ರವಿವಾರ ಮಂಗಳೂರು ತಾಲೂಕಿನಲ್ಲಿ ಇತರ ಕಡೆಗಿಂತ ಹೆಚ್ಚು ಮಳೆ ಸುರಿದಿದೆ.

ಕೃಷಿ ಚಟುವಟಿಕೆ ಚುರುಕು: ಇದೀಗ ಜುಲೈ ತಿಂಗಳ ಆರಂಭದಿಂದ ಮತ್ತೆ ಮುಂಗಾರು ಚುರುಕಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ, ಫಲ್ಗುಣಿ ನದಿಗಳು ತುಂಬಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಭತ್ತದ ನಾಟಿ ಕಾರ್ಯಕ್ಕೆ ಸುರಿಯುತ್ತಿರುವ ಮಳೆ ಪೂರಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಕಳೆದ ಎರಡು ದಿನಗಳಲ್ಲಿ ಚುರುಕುಗೊಂಡಿದ್ದು ಮೂರನೆ ದಿನ ಬಿಡುವು ನೀಡಿದೆ. ಜೊತೆಗೆ ಮಳೆಗಾಲದಲ್ಲಿ ಕಾಡುವ ಶೀತ ಜ್ವರದ ಜೊತೆಗೆ ಈ ಬಾರಿ ಕೊರೋನ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಏರುಗತಿಯಲ್ಲಿ ಸಾಗುತ್ತಿರುವುದು ಜನಸಾಮಾನ್ಯರನ್ನು, ಕೃಷಿ ಕಾರ್ಮಿಕರನ್ನು ಚಿಂತೆಗೀಡು ಮಾಡಿದೆ. ಆದರೂ ಲಾಕ್‌ಡೌನ್ ನಡುವೆಯೂ ಜಿಲ್ಲೆಯ ಭತ್ತದ ಗದ್ದೆಗಳಲ್ಲಿ ಉಳುಮೆ ಮತ್ತು ನಾಟಿ ಕಾರ್ಯ ಬಹುತೇಕ ಕಡೆ ನಡೆದಿರುವುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News